ADVERTISEMENT

ಗಡಿಯಲ್ಲಿ ಚೀನಾ ಸೇನೆ ತಾಲೀಮು

ಪಿಟಿಐ
Published 6 ಜುಲೈ 2017, 20:24 IST
Last Updated 6 ಜುಲೈ 2017, 20:24 IST
ಗಡಿಯಲ್ಲಿ ಚೀನಾ ಸೇನೆ ತಾಲೀಮು
ಗಡಿಯಲ್ಲಿ ಚೀನಾ ಸೇನೆ ತಾಲೀಮು   

ಬೀಜಿಂಗ್: ಸಿಕ್ಕಿಂ ಮತ್ತು ಭೂತಾನ್ ಗಡಿ ವಿಚಾರವಾಗಿ ಭಾರತ ಮತ್ತು ಚೀನಾ ನಡುವಣ ಸಂಬಂಧ ಬಿಗಡಾಯಿಸುತ್ತಿರುವ ಬೆನ್ನಲ್ಲೇ, ಚೀನಾ ಸೇನೆ ಭಾರತದ ಗಡಿ ಸಮೀಪ ತಾಲೀಮು ಆರಂಭಿಸಿದೆ.

ಈ ಸಂಬಂಧ ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನುಹಾ, ಟಿಬೆಟ್‌ನ ರಾಜಧಾನಿ ಲ್ಹಾಸಾದಿಂದ ವರದಿಯನ್ನು ಪ್ರಕಟಿಸಿದೆ.

‘ಸಮುದ್ರ ಮಟ್ಟದಿಂದ ಸುಮಾರು 16,732 ಎತ್ತರದ ಪ್ರದೇಶದಲ್ಲಿ ತಾಲಿಮು ನಡೆಸಲಾಗುತ್ತಿದೆ. ಸೇನೆಗೆ ಹೊಸದಾಗಿ ಸೇರ್ಪಡೆ ಆಗಿರುವ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಸೈನಿಕರು ತರಬೇತಿ ನಡೆಸುತ್ತಿದ್ದಾರೆ. ಈಚೆಗಷ್ಟೇ ಸೇನೆಗೆ ಸೇರ್ಪಡೆಯಾದ ಅತ್ಯಂತ ಹಗುರ ಟ್ಯಾಂಕ್‌ನ ಬಳಕೆಯ ತಾಲೀಮೂ ನಡೆಯುತ್ತಿದೆ’ ಎಂಬ ಮಾಹಿತಿ ವರದಿಯಲ್ಲಿದೆ.

‘ವಿಶೇಷ ಕಾರ್ಯಾಚರಣೆ ರೂಪಣೆ, ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಹಲವು ಅತ್ಯಾಧುನಿಕ ಉಪಕರಣಗಳನ್ನು ಒಂದೇ ಕಾರ್ಯಾಚರಣೆಗೆ ಹೇಗೆ ಬಳಸಬಹುದು ಎಂಬುದರ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಗುತ್ತಿದೆ. ಇವುಗಳ ಜತೆಗೆ, ದಾಳಿ ತಂತ್ರ ಮತ್ತು ರಕ್ಷಣಾ ತಂತ್ರಗಳ ಬಗ್ಗೆಯೂ ತಾಲೀಮು ನೀಡಲಾಗುತ್ತಿದೆ’ ಎಂದು ಕ್ಸಿನುಹಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.