ADVERTISEMENT

ಗಡಿಯಲ್ಲಿ ಪ್ರಚೋದನಾಕಾರಿ ನಡೆ ನಿಲ್ಲಿಸದಿದ್ದರೆ ಭಾರತ 1962ರ ಯುದ್ಧಕ್ಕಿಂತಲೂ ದೊಡ್ಡ ಸೋಲು ಅನುಭವಿಸಲಿದೆ

ಏಜೆನ್ಸೀಸ್
Published 5 ಜುಲೈ 2017, 12:47 IST
Last Updated 5 ಜುಲೈ 2017, 12:47 IST
ಗಡಿಯಲ್ಲಿ ಪ್ರಚೋದನಾಕಾರಿ ನಡೆ ನಿಲ್ಲಿಸದಿದ್ದರೆ ಭಾರತ 1962ರ ಯುದ್ಧಕ್ಕಿಂತಲೂ ದೊಡ್ಡ ಸೋಲು ಅನುಭವಿಸಲಿದೆ
ಗಡಿಯಲ್ಲಿ ಪ್ರಚೋದನಾಕಾರಿ ನಡೆ ನಿಲ್ಲಿಸದಿದ್ದರೆ ಭಾರತ 1962ರ ಯುದ್ಧಕ್ಕಿಂತಲೂ ದೊಡ್ಡ ಸೋಲು ಅನುಭವಿಸಲಿದೆ   

ನವದೆಹಲಿ: ಭಾರತ ಗಡಿ ರೇಖೆಯ ಬಳಿ ಚೀನಾವನ್ನು ಪ್ರಚೋದಿಸುತ್ತಿದೆ. ಕೂಡಲೆ ತನ್ನ ನಡೆಯನ್ನು ಬದಲಿಸಿಕೊಳ್ಳದಿದ್ದರೆ, 1962 ಯುದ್ಧದಲ್ಲಿ ಕಂಡ ಸೋಲಿಗಿಂತಲೂ ದೊಡ್ಡ ಸೋಲನ್ನು ಅನುಭವಿಸಬೇಕಾಗುತ್ತದೆ ಎಂದು ಚೀನಾದ ‘ಗ್ಲೋಬಲ್‌ ಟೈಮ್ಸ್‌’ ಮತ್ತು ‘ಚೀನಾ ಡೈಲಿ’ ಪತ್ರಿಕೆಗಳು ಬರೆದುಕೊಂಡಿವೆ.

ಸಿಕ್ಕಿಂನ ದೊಕಲಾಮ್‌ ಪ್ರದೇಶದಲ್ಲಿ ಭಾರತ ನಿಯೋಜಿಸಿರುವ ಸೇನೆಯನ್ನು ‘ಘನತೆ’ಯಿಂದ ವಾಪಸ್ಸು ಕರೆಯಿಸಿಕೊಳ್ಳಲಿ ಇಲ್ಲವಾದರೆ, ಸೋಲಿಸಿ ಹಿಮ್ಮೆಟ್ಟಿಸಲಾಗುವುದು ಎಂದು ಅವು ಎಚ್ಚರಿಕೆಯ ಧಾಟಿಯಲ್ಲಿ ಹೇಳಿವೆ.

ಗ್ಲೋಬಲ್‌ ಟೈಮ್ಸ್‌ ಪತ್ರಿಕೆ, ಹಿಂದೆ ಕಲಿತ ಕಹಿ ಪಾಠದ ಬಗ್ಗೆ ಭಾರತ ಚಿಂತಿಸಲಿ. ಅದು ನೀಡುತ್ತಿರುವ ಪ್ರಚೋದನೆಯಿಂದ ಚೀನಾ ಸಾರ್ವಜನಿಕರು ಕೋಪಗೊಂಡಿದ್ದಾರೆ. ಚೀನಾ ಪೀಪಲ್‌ ಲಿಬರೇಷನ್‌ ಸೇನೆ(ಪಿಎಲ್ಎ) ಭಾರತ ಸೇನೆಗಿಂತ ಬಲಿಷ್ಟವಾಗಿದೆ. ಗಡಿ ಪ್ರದೇಶದಿಂದ ಘನತೆಯಿಂದ ವಾಪಸ್ಸಾಗಬೇಕೆ ಅಥವಾ ಚೀನಾ ಸೈನಿಕರಿಂದ ಸೋತು ಹಿನ್ನಡೆ ಅನುಭವಿಸಬೇಕೆ ಎಂಬುದನ್ನು ಭಾರತೀಯ ಸೇನೆ ನಿರ್ಧರಿಸಲಿ ಎಂದಿದೆ.

ADVERTISEMENT

ನಾವು ಭಾರತಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಸಂಪೂರ್ಣ ಅಧಿಕಾರವನ್ನು ನೀಡುವ ಅಗತ್ಯವಿದೆ. ಈ ಸಮಯದಲ್ಲಿ ಚೀನಿಯರು ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ಒತ್ತಾಯಿಸಿದೆ.

ಕೆಲದಿನಗಳ ಹಿಂದೆ ‘ಎರಡೂವರೆ ದಿಕ್ಕುಗಳಲ್ಲಿ ಯುದ್ಧ ನಡೆಸಲು ಸೇನೆ ಸಿದ್ಧವಾಗಿದೆ’ ಎಂದು ಭಾರತದ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಹೇಳಿದ್ದ ಹೇಳಿಕೆ ಹಾಗೂ ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಅವರ, ‘ಭಾರತ 1962ಕ್ಕಿಂತ ಈಗ ಭಿನ್ನವಾಗಿದೆ’ ಎಂಬ ಹೇಳಿಕೆಯನ್ನು ಉಲ್ಲೇಖಿಸಿರುವ ಪತ್ರಿಕೆ, ಬಹುಶಃ ಕೆಲವು ಭಾರತೀಯರು 1962ರ ಸೋಲನ್ನು ಅವಮಾನ ಎಂದು ಭಾವಿಸಿದ್ದಾರೆ. ಹಾಗಾಗಿಯೇ ಅವರು ಯುದ್ಧವನ್ನು ಬಯಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.

ಮತ್ತೊಂದು ಪತ್ರಿಕೆ ‘ಚೀನಾ ಡೈಲಿ’, ‘ಭಾರತ, ಭೂತಾನ್‌ ಮೂಲಕ ಅಕ್ರಮವಾಗಿ ಚೀನಾ ಗಡಿ ಪ್ರವೇಶಿಸುತ್ತಿದೆ ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ಗಡಿ ಭಾಗದಲ್ಲಿ ಚೀನಾ ಕೈಗೊಂಡಿರುವ ರಸ್ತೆ ಕಾಮಗಾರಿಗೆ ಅಡ್ಡಿ ಪಡಿಸುವುದೇ ಭಾರತದ ಉದ್ದೇಶವಾಗಿದೆ ಎಂದು ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.