ADVERTISEMENT

ಗಡಿ ಉಲ್ಲಂಘನೆಗೆ ತಕ್ಕ ಶಾಸ್ತಿ

ವಾಯುಪಡೆ ಮುಖ್ಯಸ್ಥರಿಂದ ಪಾಕ್‌ಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2013, 20:15 IST
Last Updated 12 ಜನವರಿ 2013, 20:15 IST
ಗಡಿ ಉಲ್ಲಂಘನೆಗೆ ತಕ್ಕ ಶಾಸ್ತಿ
ಗಡಿ ಉಲ್ಲಂಘನೆಗೆ ತಕ್ಕ ಶಾಸ್ತಿ   

ನವದೆಹಲಿ (ಪಿಟಿಐ):  ನಿರಂತರವಾಗಿ ಕದನವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸುತ್ತಿರುವ ಪಾಕಿಸ್ತಾನದ ಧೋರಣೆಯನ್ನು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎನ್.ಎ.ಕೆ. ಬ್ರೌನ್ ಶನಿವಾರ ಇಲ್ಲಿ ಕಟುವಾಗಿ ಟೀಕಿಸಿದರು. ಇಂತಹ ಕುಚೇಷ್ಟೆ ಮುಂದುವರಿಸಿದರೆ `ಪಾಕ್‌ಗೆ ಉತ್ತರಿಸಲು ಭಾರತ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾದೀತು' ಎಂದು ಎಚ್ಚರಿಸಿದರು.

`ಭಾರತೀಯ ಸೈನಿಕರನ್ನು ಕ್ರೂರವಾಗಿ ಕೊಂದ ಪಾಕ್ ಸೇನೆಯ ವರ್ತನೆಯನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ನಮಗೆ ಗಡಿ ನಿಯಂತ್ರಣ ರೇಖೆ ಇದ್ದು, ಕದನ ವಿರಾಮದ ಒಪ್ಪಂದವನ್ನು ಪಾಲಿಸುತ್ತಿದ್ದೇವೆ. ಇಷ್ಟಾಗಿಯೂ ದಾಳಿ ನಡೆಸಿರುವುದನ್ನು ಸಹಿಸುವುದಿಲ್ಲ' ಎಂದು ಅವರು ಎನ್‌ಸಿಸಿ ಸಮಾರಂಭವೊಂದರ ನಂತರ ಸುದ್ದಿಗಾರರಿಗೆ ತಿಳಿಸಿದರು.

`ಇಂತಹ ಘಟನೆಗಳು ಪುನರಾವರ್ತನೆಯಾಗುವ ಸಾಧ್ಯತೆಗಳಿರುವುದರಿಂದ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪುನಃ ಹೀಗಾದಲ್ಲಿ ಸಮರ್ಥವಾಗಿ ನಿಭಾಯಿಸುವ ಇತರ ದಾರಿಗಳನ್ನು ನಾವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ' ಎಂದರು.

`ಈ ಬಗ್ಗೆ ನೀವು ಕೇಂದ್ರ ಸರ್ಕಾರಕ್ಕೆ ಯಾವ ಸಲಹೆ ನೀಡಿದ್ದೀರಿ' ಎಂದು ಪ್ರಶ್ನಿಸಿದಾಗ `ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ' ಎಂದು ಹೇಳಿದರು..

ಕಠಿಣ ನಿಲುವಿಗೆ ವಿ.ಕೆ. ಸಿಂಗ್ ಆಗ್ರಹ
(ನಾಗಪುರ ವರದಿ):
`ಕದನವಿರಾಮ ಉಲ್ಲಂಘಿಸಿ ಭಾರತೀಯ ಸೈನಿಕರನ್ನು ಅಮಾನುಷವಾಗಿ ಕೊಂದು ಹಾಕಿದ ಪಾಕಿಸ್ತಾನ, ಜಿನಿವಾ ಒಪ್ಪಂದದ ಅಂಶಗಳನ್ನು ಗಾಳಿಗೆ  ತೂರಿದೆ' ಎಂದಿರುವ ಸೇನೆಯ ನಿವೃತ್ತ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್, ಈ ಕುರಿತು ಸರ್ಕಾರ ಕಠಿಣ ನಿಲುವು ತಳೆಯಬೇಕು ಎಂದು ಆಗ್ರಹಿಸಿದರು.

`ಸೈನಿಕರು ಮತ್ತು ಯುದ್ಧಕೈದಿಗಳ ಜತೆ ಹೇಗೆ ವರ್ತಿಸಬೇಕು ಎಂಬುದರ ಕುರಿತು ಜಿನಿವಾ ಒಪ್ಪಂದದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಪಾಕ್ ಸೈನಿಕರು ನಡೆದುಕೊಂಡಿದ್ದಾರೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

`ಪಾಕ್ ಜತೆ ಸಂಬಂಧ ಕಡಿದುಕೊಳ್ಳಿ'
(ಅಗರ್ತಲ ವರದಿ):
ಪಾಕ್ ಜತೆಗಿನ ಎಲ್ಲ ದ್ವಿಪಕ್ಷೀಯ ಸಂಬಂಧಗಳನ್ನು ಕಡಿದುಕೊಳ್ಳಲು ಇದು ಸಕಾಲ ಎಂದು ವಿಶ್ವ ಹಿಂದು ಪರಿಷತ್ ಹೇಳಿದೆ.

`ಮುಂಬೈ ದಾಳಿ ಹಾಗೂ ಸಂಸತ್ತಿನ ಮೇಲಿನ ದಾಳಿಗೆ ಕಾರಣವಾದ ಪಾಕಿಸ್ತಾನ ಇದೀಗ ನಮ್ಮ ಸೈನಿಕರನ್ನು ಅಮಾನುಷವಾಗಿ ಹತ್ಯೆಗೈದಿದೆ. ಇಂತಹ ಸಂದರ್ಭದಲ್ಲಿ ಭಾರತ ಆ ದೇಶದೊಂದಿಗೆ ಯಾವುದೇ ರೀತಿಯ ಸಂಬಂಧ ಇಟ್ಟುಕೊಳ್ಳಬಾರದು ಎಂಬುದು ನಮ್ಮ ಆಗ್ರಹ' ಎಂದು ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ ತೊಗಾಡಿಯ ಹೇಳಿದರು.

`ಕಾರ್ಯಾಚರಣೆ ನಡೆಸಿ'
(ಬೆಂಗಳೂರು ವರದಿ)
:  ಇಬ್ಬರು ಸೈನಿಕರನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಪಾಕಿಸ್ತಾನ ಜೊತೆಗೆ ಮಾತುಕತೆ ನಡೆಸುವುದು ಸರಿಯಲ್ಲ. ಕಾರ್ಯಾಚರಣೆಯ ಮೂಲಕವೇ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಬೇಕು ಎಂದು ಸಂಸದ ಅನಂತಕುಮಾರ್ ಪ್ರತಿಕ್ರಿಯಿಸಿದರು.

ದೆಹಲಿಯಲ್ಲಿ ಮಾತನಾಡಿದ ಬಿಜೆಪಿ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್ `ಪಾಕ್‌ನಿಂದ ಭಾರತದ ಹೈಕಮೀಷನರ್ ಅವರನ್ನು ವಾಪಸ್ ಕರೆಯಿಸಿಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಕಠಿಣ ನಿಲುವಿನ ಸಂದೇಶ ರವಾನಿಸಬೇಕು' ಎಂದು ಒತ್ತಾಯಿಸಿದ್ದಾರೆ.

`ಇಸ್ಲಾಂ ವಿರೋಧಿ ಕೃತ್ಯ'
ಅಲಿಗಡ (ಪಿಟಿಐ): `ಇಬ್ಬರು ಭಾರತೀಯ ಸೇನಿಕರನ್ನು ಕ್ರೂರವಾಗಿ ಕೊಂದಿರುವ ಪಾಕಿಸ್ತಾನ ಸೈನಿಕರ ಕೃತ್ಯ ಹೇಯ; ಅಷ್ಟೇ ಅಲ್ಲ ಇಸ್ಲಾಂ ವಿರೋಧಿ' ಎಂದು ಮುಸ್ಲಿಂ ಬುದ್ಧಿಜೀವಿಗಳ ವೇದಿಕೆಯೊಂದು ಹೇಳಿದೆ.

ಇಲ್ಲಿಯ ಮಸ್ಲಿಂ ಅಧ್ಯಯನ ಹಾಗೂ ವಿಶ್ಲೇಷಣೆ ವೇದಿಕೆಯ (ಎಫ್‌ಎಂಎಸ್‌ಎ) ಸಭೆಯಲ್ಲಿ ಈ ಸಂಬಂಧ ಖಂಡನಾ ನಿರ್ಣಯ ಕೈಗೊಳ್ಳಲಾಗಿದೆ.  `ಮುಸ್ಲಿಂ ರಾಷ್ಟ್ರಗಳಲ್ಲಿ ವಾಸವಾಗಿರುವ, ನ್ಯಾಯ ಹಾಗೂ ಮಾನವೀಯತೆ ಪ್ರತಿಪಾದಿಸುವ ಎಲ್ಲರೂ ಪಾಕ್‌ನ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಬೇಕು' ಎಂದು ವೇದಿಕೆಯ ಪ್ರತಿನಿಧಿ ಜಸಿಮ್ ಮಹಮ್ಮದ್ ತಿಳಿಸಿದರು. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಹಲವು ವಿದ್ವಾಂಸರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

`ಶಾಂತಿ ಪ್ರಕ್ರಿಯೆಗೆ ಹಿನ್ನಡೆ'
ನವದೆಹಲಿ:  ಪಾಕ್ ಕೃತ್ಯದಿಂದಾಗಿ ಉಭಯ ದೇಶಗಳ ನಡುವಣ ಶಾಂತಿ ಸೌಹಾರ್ದತೆಯ ಪ್ರಕ್ರಿಯೆಗಳಿಗೆ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕಿ ಅಂಬಿಕಾ ಸೋನಿ ಹೇಳಿದ್ದಾರೆ.

`ಎರಡೂ ದೇಶಗಳ ನಡುವೆ ವಿಶ್ವಾಸ ವೃದ್ಧಿಸುವ ಸರಣಿ ಕ್ರಮಗಳು ಜಾರಿಗೆ ಬಂದಿದ್ದು, ವ್ಯಾಪಾರ ವಹಿವಾಟಿನಲ್ಲೂ ಹೆಚ್ಚಳ ಕಂಡುಬಂದಿದೆ, ವಿಸಾ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ನಮ್ಮ ಸೈನಿಕರನ್ನು ಅಮಾನುಷವಾಗಿ ಹತ್ಯೆಗೈದಿರುವ ಘಟನೆ ಈ ಎಲ್ಲ ಪ್ರಕ್ರಿಯೆಗಳಿಗೆ ಹಿನ್ನಡೆ ಎನಿಸಿದೆ' ಎಂದು ಸೋನಿ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.