ADVERTISEMENT

ಗಡುವು ವಾಪಸ್‌: ಕಾಂಗ್ರೆಸ್‌ ನಿರಾಳ

ರಾಹುಲ್‌ ರ‍್ಯಾಲಿಗೆ ವಿರೋಧ ಇಲ್ಲ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 19:30 IST
Last Updated 30 ಅಕ್ಟೋಬರ್ 2017, 19:30 IST
ಗುಜರಾತಿನ ಭಾವನಗರದಲ್ಲಿ ಹಾರ್ದಿಕ್‌ ಪಟೇಲ್‌ ರೋಡ್‌ ಷೋ
ಗುಜರಾತಿನ ಭಾವನಗರದಲ್ಲಿ ಹಾರ್ದಿಕ್‌ ಪಟೇಲ್‌ ರೋಡ್‌ ಷೋ   

ಅಹಮದಾಬಾದ್‌: ಅಧಿಕಾರಕ್ಕೆ ಬಂದರೆ ಪಟೇಲ್‌ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ನವೆಂಬರ್‌ 3ರೊಳಗೆ ಭರವಸೆ ಕೊಡಬೇಕು. ಇಲ್ಲವಾದರೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ರ‍್ಯಾಲಿಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂಬ ಬೆದರಿಕೆಯನ್ನು ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿಯು (ಪಿಎಎಎಸ್‌) ಹಿಂದಕ್ಕೆ ಪಡೆದಿದೆ. ಇದರೊಂದಿಗೆ ಕಾಂಗ್ರೆಸ್‌ ಪಕ್ಷ ಎದುರಿಸುತ್ತಿದ್ದ ಇಕ್ಕಟ್ಟು ಸ್ವಲ್ಪ ಮಟ್ಟಿಗೆ ತಿಳಿಯಾಗಿದೆ.

‘ರಾಜ್ಯಕ್ಕೆ ರಾಹುಲ್‌ ಭೇಟಿಯನ್ನು ನಾವು ಬೆಂಬಲಿಸುವುದೂ ಇಲ್ಲ, ವಿರೋಧಿಸುವುದೂ ಇಲ್ಲ’ ಎಂದು ಪಿಎಎಎಸ್‌ನ ಸಂಚಾಲಕ ಅಲ್ಪೆಶ್‌ ಕಥಿರಿಯ ಹೇಳಿದ್ದಾರೆ.

ಕಾಂಗ್ರೆಸ್‌ ಮುಖಂಡರ ಜತೆ ಅಲ್ಪೆಶ್‌ ಅವರು ಮೂರೂವರೆ ತಾಸು ಮಾತುಕತೆ ನಡೆಸಿದರು. ಪಟೇಲ್‌ ಮತ್ತು ಇತರ ಮೇಲ್ಜಾತಿಗಳಿಗೆ ಶೇ 20ರಷ್ಟು ಮೀಸಲಾತಿ ನೀಡುವ ಪ್ರಸ್ತಾವದ ಬಗ್ಗೆ ಅವರು ಚರ್ಚೆ ನಡೆಸಿದ್ದಾರೆ. ಶೇ 10ರಷ್ಟು ಮೀಸಲಾತಿ ನೀಡುವುದಾಗಿ ಬಿಜೆಪಿ ಈಗಾಗಲೇ ಭರವಸೆ ಕೊಟ್ಟಿದೆ.

ADVERTISEMENT

ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥ ಭರತ್‌ಸಿಂಹ ಸೋಲಂಕಿ, ಮುಖಂಡರಾದ ಸಿದ್ಧಾರ್ಥ ಪಟೇಲ್‌ ಮತ್ತು ಅರ್ಜುನ್‌ ಮೊಧ್ವಾಡಿಯಾ ಜತೆ ಅಲ್ಪೆಶ್‌ ಮತ್ತು ಪಿಎಎಎಸ್‌ನ ಮುಖಂಡರಾದ ದಿನೇಶ್ ಭಂಬಾನಿಯಾ ಮತ್ತು ಲಲಿತ್‌ ವಸೋಯ ಮಾತುಕತೆ ನಡೆಸಿದರು. ‘ಕಾಂಗ್ರೆಸ್‌ ಮುಖಂಡರ ಜತೆ ನಡೆಸಿದ ಮಾತುಕತೆ ನಮಗೆ ತೃಪ್ತಿ ತಂದಿದೆ. ಹೋರಾಟದ ಮುಖ್ಯಸ್ಥ ಹಾರ್ದಿಕ್‌ ಪಟೇಲ್‌ ಮತ್ತು ತಂಡದ ಇತರರ ಜತೆ ಚರ್ಚಿಸಿ ನವೆಂಬರ್‌ 3ರಂದು ರಾಹುಲ್‌ ಅವರನ್ನು ಭೇಟಿ ಮಾಡುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಅಲ್ಪೆಶ್‌ ತಿಳಿಸಿದ್ದಾರೆ.

ಪಟೇಲ್‌ ಹೋರಾಟದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ, ಹೋರಾಟದಲ್ಲಿ ಮೃತಪಟ್ಟ 14 ಯುವಕರ ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ ಮತ್ತು ನೆರವು, ಮೃತರ ಕುಟುಂಬಗಳಿಗೆ ಪರಿಹಾರ ಮೊತ್ತವನ್ನು ₹35 ಲಕ್ಷಕ್ಕೆ ಏರಿಸುವುದು, ಪಟೇಲ್‌ ಯುವಕರ ಮೇಲೆ ದಾಖಲಿಸಲಾಗಿರುವ ಪ್ರಕರಣಗಳನ್ನು ರದ್ದುಪಡಿಸುವುದು ಮತ್ತು ಮೀಸಲಾತಿರಹಿತ ಜಾತಿಗಳ ಆಯೋಗಕ್ಕೆ ₹2,000 ಕೋಟಿ ಅನುದಾನ ಒದಗಿಸುವುದು ಪಟೇಲ್‌ ಸಮುದಾಯ  ಮುಂದಿಟ್ಟ ಬೇಡಿಕೆಗಳಾಗಿವೆ.

‘ನಾವು ಮುಂದಿಟ್ಟಿರುವ ಐದು ಬೇಡಿಕೆಗಳನ್ನು ಕಾಂಗ್ರೆಸ್‌ ಪಕ್ಷ ಒಪ್ಪಿದೆ. ಮೀಸಲಾತಿಗೆ ಸಂಬಂಧಿಸಿ ಎರಡೂವರೆ ತಾಸು ಚರ್ಚೆ ನಡೆದಿದೆ. ಈ ಬಗ್ಗೆ ಸಂವಿಧಾನ ಮತ್ತು ಕಾನೂನು ತಜ್ಞರ ಜತೆ ಚರ್ಚೆ ನಡೆಸುತ್ತೇವೆ’ ಎಂದು ಅಲ್ಪೆಶ್‌ ತಿಳಿಸಿದ್ದಾರೆ.

ಪಟೇಲ್‌ ಸಮುದಾಯವು ಯಾವುದೇ ಪಕ್ಷವನ್ನು ಬೆಂಬಲಿಸುವ ನಿರ್ಧಾರವನ್ನು ಈ ವರೆಗೆ ಕೈಗೊಂಡಿಲ್ಲ. ಆದರೆ ಬಿಜೆಪಿಯನ್ನು ವಿರೋಧಿಸುತ್ತೇವೆ. ನವೆಂಬರ್‌ 6–7 ರಂದು ನಡೆಯಲಿರುವ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಲ್ಪೆಶ್‌ ಹೇಳಿದ್ದಾರೆ.

ಕಾಂಗ್ರೆಸ್‌ ಜತೆಗೆ ಪಿಎಎಎಸ್‌ ನಡೆಸಿದ ಮಾತುಕತೆಗೆ ಪ್ರತಿಕ್ರಿಯೆ ನೀಡಿರುವ ಹಾರ್ದಿಕ್ ಪಟೇಲ್‌ ಅವರು ತಮ್ಮ ಸಮುದಾಯಕ್ಕೆ ಮೀಸಲಾತಿ ಸಿಗಲೇಬೇಕು ಎಂದು ಹೇಳಿದ್ದಾರೆ.

‘ಸ್ವರ್ಗದಿಂದಲಾದೂ ತನ್ನಿ, ಪಾತಾಳದಿಂದಲಾದರೂ ತನ್ನಿ, ಮೀಸಲಾತಿ ಕೊಡಿ’ ಎಂದು ಹೇಳಿದ್ದಾರೆ.

ಎಎಪಿಗೆ ಹೊಡೆತ: ಗುಜರಾತ್‌ನಲ್ಲಿ ಭಾರಿ ನಿರೀಕ್ಷೆ ಇರಿಸಿಕೊಂಡಿರುವ ಆಮ್‌ ಆದ್ಮಿ ಪಕ್ಷಕ್ಕೆ (ಎಎಪಿ) ಭಾರಿ ಹೊಡೆತ ಬಿದ್ದಿದೆ. ಪಕ್ಷದ ಮಹಿಳಾ ಘಟಕದ ಮುಖ್ಯಸ್ಥೆ ವಂದನಾ ಪಟೇಲ್‌ ಅವರು ಎಎಪಿ ತೊರೆದು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಸೇರಿದ್ದಾರೆ.  ಎಎಪಿ ಟೋಪಿಗಳನ್ನು ಧರಿಸಿಕೊಂಡು ಕಾಂಗ್ರೆಸ್‌ ಪಕ್ಷದ ಕಚೇರಿಗೆ ವಂದನಾ ಮತ್ತು ಅವರಬೆಂಬಲಿಗರು ಹೋದರು. ಕಾಂಗ್ರೆಸ್‌ ರಾಜ್ಯ ಘಟಕದ ಮುಖ್ಯಸ್ಥ ಭರತ್‌ ಸಿಂಹ ಸೋಲಂಕಿ ಅವರು ಶಾಲು ಹೊದಿಸಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ವಂದನಾ ಅವರು ಬಿಜೆಪಿಯಿಂದ ಎಎಪಿ ಸೇರಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಅವರು ಮೆಹ್ಸಾನಾ ಕ್ಷೇತ್ರದಿಂದ ಎಎಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತಿದ್ದರು.

‘ಗುಜರಾತ್‌ನ ಎಎಪಿ ಘಟಕವು ಬಿಜೆಪಿಯ ಬಿ ತಂಡದಂತೆ ಕೆಲಸ ಮಾಡುತ್ತಿದೆ. ಇದರ ಬಗ್ಗೆ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರಿಗೆ ಅರಿವೇ ಇಲ್ಲ’ ಎಂದು ವಂದನಾ ಅವರು ಆರೋಪಿಸಿದ್ದಾರೆ.

* ನಮ್ಮ ಬೇಡಿಕೆಗಳಿಗೆ ಒಪ್ಪಿಗೆ ಕೊಟ್ಟರೆ ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತೇವೆ. ಆದರೆ ತಲೆ ಕತ್ತರಿಸಿದರೂ ಬಿಜೆಪಿ ಜತೆ ಹೋಗುವುದಿಲ್ಲ.

-ಹಾರ್ದಿಕ್‌ ಪಟೇಲ್‌, ಪಟೇಲ್‌ ಮೀಸಲು ಹೋರಾಟದ ನಾಯಕ 

ಕಳಂಕಿತರು ಬೇಡ: ಸುಪ್ರೀಂ

ಶಿಸ್ತು  ಕ್ರಮ ಎದುರಿಸುತ್ತಿರುವ ಮತ್ತು ಕಳಂಕಿತರಾದ ಅಧಿಕಾರಿಗಳನ್ನು ವಿಧಾನಸಭಾ ಚುನಾವಣೆ ನಡೆಯಲಿರುವ ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಯಾವುದೇ ಪ್ರಮುಖ ಹುದ್ದೆಗೆ ನೇಮಿಸಬಾರದು ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಜನರ ಚಲನವಲನಗಳ ಮೇಲೆ ನಿಗಾ ಇರಿಸುವುದಕ್ಕಾಗಿ ಮತಗಟ್ಟೆಗಳ ಒಳಗೆ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಕೋರಿ ಕಾಂಗ್ರೆಸ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಜೋಷಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಕೋರಿಕೆಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.