ADVERTISEMENT

ಗಡ್ಕರಿಯೂ ಭೂಗಳ್ಳ - ಕೇಜ್ರಿವಾಲ್ ಆರೋಪ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 19:30 IST
Last Updated 17 ಅಕ್ಟೋಬರ್ 2012, 19:30 IST
ಗಡ್ಕರಿಯೂ ಭೂಗಳ್ಳ - ಕೇಜ್ರಿವಾಲ್ ಆರೋಪ
ಗಡ್ಕರಿಯೂ ಭೂಗಳ್ಳ - ಕೇಜ್ರಿವಾಲ್ ಆರೋಪ   

ನವದೆಹಲಿ: `ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಉಮ್ರೇಡ್ ತಾಲ್ಲೂಕಿನಲ್ಲಿ ಅಣೆಕಟ್ಟೆ ನಿರ್ಮಾಣಕ್ಕೆ ರೈತರಿಂದ ವಶಪಡಿಸಿಕೊಳ್ಳಲಾದ ಕೃಷಿ ಭೂಮಿಯಲ್ಲಿ  ನೂರು ಎಕರೆಭೂಮಿಯನ್ನು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮಹಾರಾಷ್ಟ್ರದ ಕಾಂಗ್ರೆಸ್- ಎನ್‌ಸಿಪಿ ಸರ್ಕಾರದ ನೆರವಿನಿಂದ ಕಬಳಿಸಿದ್ದಾರೆ~ ಎಂದು `ಭ್ರಷ್ಟಾಚಾರ ವಿರೋಧಿ ಆಂದೋಲನ~ದ ಮುಖಂಡ ಅರವಿಂದ ಕೇಜ್ರಿವಾಲ್ ಆರೋಪ ಮಾಡಿದರು.

ಮಹಾರಾಷ್ಟ್ರ ಸರ್ಕಾರ ಅದರಲ್ಲೂ ಮಾಜಿ ನೀರಾವರಿ ಸಚಿವ ಅಜಿತ್ ಪವಾರ್ ಭಾಗಿಯಾಗಿರುವ ರೂ 70 ಸಾವಿರ ಕೋಟಿ ಮೌಲ್ಯದ `ನೀರಾವರಿ ಹಗರಣ~ವನ್ನು ವಿರೋಧ ಪಕ್ಷ ಬಿಜೆಪಿ ಪ್ರಮುಖವಾಗಿ ಪ್ರಸ್ತಾಪಿಸದಂತೆ ನೋಡಿಕೊಳ್ಳುವ ಉದ್ದೇಶದಿಂದ ಗಡ್ಕರಿ ಅವರಿಗೆ ನೂರು ಎಕರೆ ಕೃಷಿ ಭೂಮಿ  `ಉಡುಗೊರೆ~ ನೀಡಲಾಗಿದೆ ಎಂದು ದೂರಿದರು.

`ಗಡ್ಕರಿ ಹಗರಣಗಳನ್ನು ಕೇಜ್ರಿವಾಲ್ ಬಯಲಿಗೆಳೆಯಲಿದ್ದಾರೆ~ ಎಂದು ಕೆಲವು ದಿನಗಳಿಂದ ಹರಡಿದ್ದ ಸುದ್ದಿಯ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ  ತೀವ್ರ ಕುತೂಹಲ ಕೆರಳಿಸಿತ್ತು.

ತನಿಖೆಗೆ ಸಿದ್ಧ: ಪತ್ರಿಕಾಗೋಷ್ಠಿ ಬಳಿಕ  ಕೇಜ್ರಿವಾಲ್ ಆರೋಪಗಳಿಗೆ ಉತ್ತರಿಸಿರುವ ಬಿಜೆಪಿ ಅಧ್ಯಕ್ಷರು, ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದಿದ್ದಾರೆ. ಬಿಜೆಪಿ ಉಳಿದ ನಾಯಕರು ಗಡ್ಕರಿ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಉಮ್ರೇಡ್ ತಾಲೂಕಿನಲ್ಲಿ ಅಣೆಕಟ್ಟೆ ನಿರ್ಮಾಣಕ್ಕೆ ರೈತರಿಂದ ಭೂಮಿ ವಶಪಡಿಸಿಕೊಳ್ಳಲಾಗಿತ್ತು. ಹೆಚ್ಚುವರಿ ಜಮೀನನ್ನು ರೈತರಿಗೆ ವಾಪಸ್ ಮಾಡಬೇಕಿತ್ತು. ಆದರೆ, ಸರ್ಕಾರ ಹಾಗೆ ಮಾಡಲಿಲ್ಲ. ನೀರಾವರಿ ಸಚಿವ ಅಜಿತ್ ಪವಾರ್ ತಮ್ಮ ಇಲಾಖೆ ವಶದಲ್ಲಿದ್ದ ಭೂಮಿಯನ್ನು ತರಾತುರಿಯಲ್ಲಿ ಬಿಜೆಪಿ ಅಧ್ಯಕ್ಷ ಗಡ್ಕರಿ ಅವರಿಗೆ ಮಂಜೂರು ಮಾಡಿದ್ದಾರೆ ಎಂದು ಕೇಜ್ರಿವಾಲ್ ಆಪಾದಿಸಿದರು.

`ವಿದರ್ಭ ನೀರಾವರಿ ಅಭಿವೃದ್ಧಿ  ನಿಗಮ~ದ ವಿರೋಧದ ನಡುವೆಯೂ ರೈತರ ಭೂಮಿಯನ್ನು ಗಡ್ಕರಿ ಅವರಿಗೆ ಮಂಜೂರು ಮಾಡಲಾಗಿದೆ. ಈ ಭೂಮಿಯನ್ನು ಹಿಂದಕ್ಕೆ ಪಡೆಯಲು ರೈತರು ಹೋರಾಟ ನಡೆಸುತ್ತಿದ್ದಾರೆ. ಆಡಳಿತ ಹಾಗೂ ವಿರೋಧ ಪಕ್ಷಗಳು ದೇಶ ಲೂಟಿ ಮಾಡುವ ಕಾಯಕದಲ್ಲಿ ನಿರತರಾಗಿವೆ. ಪರಸ್ಪರ ಷಾಮೀಲಾಗಿ ನೆಪ ಮಾತ್ರಕ್ಕೆ ಹಗರಣಗಳನ್ನು ಕೆದಕುವ ಕೆಲಸ ಮಾಡುತ್ತಿವೆ~ ಎಂದು ಟೀಕಿಸಿದರು.

`ಭ್ರಷ್ಟಾಚಾರದ ವಿರುದ್ಧ ಭಾರತ~ (ಐಎಸಿ) ನಾಯಕರಾದ ಪ್ರಶಾಂತ್ ಭೂಷಣ್, ಅಂಜಲಿ ದಮಾನಿಯಾ ಮತ್ತಿತರರು ಪಾಲ್ಗೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ, ಮಹಾರಾಷ್ಟ್ರ ಸರ್ಕಾರದ ನೀರಾವರಿ ಯೋಜನೆಯ ಅವ್ಯವಹಾರ ಸೇರಿದಂತೆ ಹಲವು ಭ್ರಷ್ಟಾಚಾರ ಹಗರಣಗಳ ವಿರುದ್ಧ ದನಿ ಎತ್ತಬೇಕಾದ ವಿರೋಧ ಪಕ್ಷ ಬಿಜೆಪಿ ಮೌನ ತಾಳಿದೆ ಎಂದು ಅರವಿಂದ್ ಕೇಜ್ರಿವಾಲ್ ಆಪಾದಿಸಿದರು.

ಗಡ್ಕರಿ ಅವರಿಗೆ ಲಾಭ ಮಾಡಿಕೊಡಲು ಮಹಾರಾಷ್ಟ್ರ ಸರ್ಕಾರ ಅದರಲ್ಲೂ ನೀರಾವರಿ ಯೋಜನೆ ಹಗರಣದಲ್ಲಿ ಕಳಂಕಿತರಾಗಿರುವ ಅಜಿತ್ ಪವಾರ್ ನಿಯಮಗಳನ್ನು ತಿರುಚಿದ್ದಾರೆ. ಹೆಚ್ಚುವರಿ ಭೂಮಿ ಹಿಂತಿರುಗಿಸಬೇಕೆಂಬ ರೈತರ ಮನವಿಯನ್ನು 2002ರಲ್ಲಿ ಅಲ್ಲಿನ ಸರ್ಕಾರ ತಿರಸ್ಕರಿಸಿದೆ. ಇದೇ ಭೂಮಿಯನ್ನು ನಿತಿನ್ ಗಡ್ಕರಿ ಅವರಿಗೆ 2005ರಲ್ಲಿ ಮನವಿ  ಮಾಡಿದ ಕೆಲವೇ ದಿನಗಳಲ್ಲಿ ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು.

`ಹೆಚ್ಚುವರಿ ಭೂಮಿಯನ್ನು ಗಡ್ಕರಿ ಅವರಿಗೆ ಕಾನೂನು ಪ್ರಕಾರ ಮಂಜೂರು ಮಾಡಲು ಸಾಧ್ಯವಿಲ್ಲ~ ಎಂದು ವಿದರ್ಭ ನೀರಾವರಿ ಅಭಿವೃದ್ಧಿ ನಿಗಮ ಹೇಳಿದೆ. ಆದರೂ ಆಗಿನ ನೀರಾವರಿ ಸಚಿವರು ಹಲವು ಪತ್ರಗಳನ್ನು ಬರೆದು ಭೂಮಿ ಮಂಜೂರು ಮಾಡಲು ಪ್ರಭಾವ ಬೀರಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು `ಭ್ರಷ್ಟಾಚಾರದ ವಿರುದ್ಧ ಭಾರತ~ ಸಂಘಟನೆ `ವೆಬ್‌ಸೈಟ್~ನಲ್ಲಿ ಲಭ್ಯವಿದೆ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದರು.

`ಬಿಜೆಪಿಯನ್ನು ಗಡ್ಕರಿ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಆಡಳಿತ ಪಕ್ಷದ ಜತೆ ಷಾಮೀಲಾಗಿ `ಉದ್ಯಮ ಸಾಮ್ರಾಜ್ಯ~ ವಿಸ್ತರಿಸಿಕೊಳ್ಳುತ್ತಿದ್ದಾರೆ. ಕೇಂದ್ರ ನೀರಾವರಿ ಸಚಿವ ಪಿ.ಕೆ. ಬನ್ಸಲ್ ಅವರಿಗೆ ಪತ್ರ ಬರೆದು ಅಣೆಕಟ್ಟೆ ನಿರ್ಮಾಣ ಮಾಡಿದ ಗುತ್ತಿಗೆದಾರರ ರೂ 400 ಕೋಟಿ ಬಾಕಿ ಬಿಲ್ ಪಾವತಿ ಮಾಡುವಂತೆ ಪ್ರಭಾವ ಬೀರಿದ್ದಾರೆ~ ಎಂದು ಅವರು ಆರೋಪ ಮಾಡಿದರು.

`ಗಡ್ಕರಿ ಅತ್ಯಲ್ಪ ಸಮಯದಲ್ಲಿ `ದೊಡ್ಡ ಸಾಮ್ರಾಜ್ಯ~ವನ್ನೇ ನಿರ್ಮಿಸಿದ್ದಾರೆ. ಸಕ್ಕರೆ ಕಾರ್ಖಾನೆ, ವಿದ್ಯುತ್ ಉತ್ಪಾದನಾ ಘಟಕ, ನಿರ್ಮಾಣ ಉದ್ಯಮ, ಕಲ್ಲಿದ್ದಲು ಉದ್ಯಮ, ಡಿಸ್ಟಿಲರಿ ಸೇರಿದಂತೆ 17ಕ್ಕೂ ಹೆಚ್ಚು ಕಂಪೆನಿಗಳ ಒಡೆಯರಾಗಿದ್ದಾರೆ ಎಂದು `ಐಎಸಿ~ ಮುಖಂಡರು ವಿವರಿಸಿದರು.

ಆರೋಪ ನಿರಾಕರಣೆ :`ನೂರು ಎಕರೆ ಕೃಷಿ ಭೂಮಿ ಕಬಳಿಸಿದ ಆರೋಪ ನಿರಾಕರಿಸಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಕೃಷಿ ಯೋಗ್ಯವಲ್ಲದ ಬಂಜರು ಭೂಮಿಯನ್ನು `ಪೂರ್ತಿ ಸಿಂಚನ್ ಕಲ್ಯಾಣ ಕಾರ್ಯ ಸಂಸ್ಥೆ~ ಚಾರಿಟೇಬಲ್ ಟ್ರಸ್ಟ್‌ಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. `ಇದು ಕೃಷಿಗೆ ಯೋಗ್ಯವಲ್ಲದ ಜಮೀನು. ಇದರ ಬೆಲೆ ಕೇವಲ ರೂ 20ಲಕ್ಷ ಇರಬಹುದು. ಈ ಭೂಮಿಯನ್ನು ಖಾಸಗಿ ಕಂಪೆನಿ ಅಥವಾ ಯಾವುದೇ ವ್ಯಕ್ತಿಗೆ ನೀಡಿಲ್ಲ. ಚಾರಿಟೇಬಲ್ ಟ್ರಸ್ಟ್‌ಗೆ ಕೊಡಲಾಗಿದೆ~ ಎಂದು ಕೇಜ್ರಿವಾಲ್ ಪತ್ರಿಕಾಗೋಷ್ಠಿ ಬಳಿಕ ಗಡ್ಕರಿ ಪತ್ರಕರ್ತರಿಗೆ ತಿಳಿಸಿದರು.

`ನನ್ನ ಮೇಲೆ ಮಾಡಿರುವ ಆರೋಪಗಳು ನಿರಾಧಾರ ಮತ್ತು ದುರದೃಷ್ಟಕರ. ಈ ಟ್ರಸ್ಟ್ ನನಗೆ ಸೇರಿದ್ದಲ್ಲ. ಕೇಜ್ರಿವಾಲ್ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ತನಿಖೆ ಎದುರಿಸಲು ಸಿದ್ಧ~ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಕಾಂಗ್ರೆಸ್ ಹಾಗೂ ಐಎಸಿ ಷಾಮೀಲಾಗಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುವ ಕೆಲಸಕ್ಕೆ ಕೈಹಾಕಿವೆ. ವಿರೋಧಿ ಮತಗಳನ್ನು ಒಡೆಯುವ ಉದ್ದೇಶದಿಂದ ಈ ಪಿತೂರಿ ಮಾಡಲಾಗುತ್ತಿದೆ ಎಂದು ಗಡ್ಕರಿ ವಿಶ್ಲೇಷಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT