ADVERTISEMENT

ಗಣರಾಜ್ಯೋತ್ಸವ: ಆತಂಕ ಸೃಷ್ಟಿಸಿದ ಬಲೂನು

​ಪ್ರಜಾವಾಣಿ ವಾರ್ತೆ
Published 26 ಜನವರಿ 2016, 19:30 IST
Last Updated 26 ಜನವರಿ 2016, 19:30 IST
ಸೇನಾಶಕ್ತಿ ಪ್ರದರ್ಶನದಲ್ಲಿ ಅಗ್ನಿ–2 ಕ್ಷಿಪಣಿಗಳನ್ನು ಹೊತ್ತು ಸಾಗಿದ  ಸೇನಾ ಟ್ರಕ್‌ಗಳು. ಅಸ್ಸಾಂನ ಸ್ತಬ್ಧಚಿತ್ರದೊಂದಿಗೆ ‘ಬಿಹು’ ನೃತ್ಯ ಪ್ರದರ್ಶಿಸಿದ ಕಲಾವಿದರು   –ಎಎಫ್‌ಪಿ ಚಿತ್ರ
ಸೇನಾಶಕ್ತಿ ಪ್ರದರ್ಶನದಲ್ಲಿ ಅಗ್ನಿ–2 ಕ್ಷಿಪಣಿಗಳನ್ನು ಹೊತ್ತು ಸಾಗಿದ ಸೇನಾ ಟ್ರಕ್‌ಗಳು. ಅಸ್ಸಾಂನ ಸ್ತಬ್ಧಚಿತ್ರದೊಂದಿಗೆ ‘ಬಿಹು’ ನೃತ್ಯ ಪ್ರದರ್ಶಿಸಿದ ಕಲಾವಿದರು –ಎಎಫ್‌ಪಿ ಚಿತ್ರ   

ನವದೆಹಲಿ (ಪಿಟಿಐ/ಐಎಎನ್‌ಎಸ್): ಗಣರಾಜ್ಯೋತ್ಸವದ ಅಂಗವಾಗಿ ಮಂಗಳವಾರ ದೇಶದ ಎಲ್ಲೆಡೆ ಪೊಲೀ
ಸರು ಮತ್ತು ಭದ್ರತಾ ಪಡೆಗಳು ಭಾರಿ ಕಟ್ಟೆಚ್ಚರ ವಹಿಸಿದ್ದವು. ಇದರ ನಡುವೆಯೂ ದೇಶದ ವಿವಿಧೆಡೆ ನಡೆದ ಕೆಲವು ಘಟನೆಗಳು ಆತಂಕಕ್ಕೆ ಕಾರಣವಾಗಿದ್ದವು.

ಉಗ್ರನನ್ನು ಕೊಂದ ಯೋಧರು: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಮಂಗಳವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ  ಉಗ್ರರು ಮತ್ತು ಭದ್ರತಾ ಪಡೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ.  ಘಟನೆಯಲ್ಲಿ ಸೈನಿಕರು ಒಬ್ಬ ಉಗ್ರನನ್ನು ಕೊಂದಿದ್ದಾರೆ.

ಉಗ್ರರು ಗೆರಿಲ್ಲಾ ಮಾದರಿಯಲ್ಲಿ ಗುಂಡಿನ  ದಾಳಿ ನಡೆಸಿದರು. ನಾವು ನಡೆಸಿದ ಪ್ರತಿದಾಳಿಯಲ್ಲಿ ಒಬ್ಬ ಉಗ್ರ ಹತನಾಗಿದ್ದಾನೆ. ಉಳಿದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಮೃತ ಉಗ್ರನಿಂದ ಎಕೆ47 ಬಂದೂಕು ಮತ್ತು ಗುಂಡಿನ ಮೂರು ಮ್ಯಾಗಜಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಂಕಿತ ಬಲೂನು ಹೊಡೆದುರುಳಿಸಿದ  ವಾಯುಪಡೆ: ರಾಜಸ್ತಾನದ ಬಾರ್ಮೇರ್‌ ಜಿಲ್ಲೆಯಲ್ಲಿ ಮಂಗಳವಾರ ಆಗಸದಲ್ಲಿ ತೇಲುತ್ತಿದ್ದ ಬಲೂನಿನಂತಹ ವಸ್ತುವೊಂದನ್ನು ಭಾರತೀಯ ವಾಯುಪಡೆಯ  (ಐಎಎಫ್‌) ಸುಖೋಯ್‌–30 ಯುದ್ಧವಿಮಾನ ಹೊಡೆದುರುಳಿಸಿದೆ.

ಬೆಳಿಗ್ಗೆ 10.30ರಿಂದ 11 ಗಂಟೆ ನಡುವಣ ಅವಧಿಯಲ್ಲಿ ರೇಡಾರ್‌ ಆ ವಸ್ತುವನ್ನು ಗುರುತಿಸಿತ್ತು. ಅದು ಹವಾಮಾನ ಇಲಾಖೆ ವಾತಾವರಣ ಪರಿಶೀಲನೆಗೆ ತೇಲಿಬಿಡುವ ಬಲೂನನ್ನೇ ಹೋಲುತ್ತಿತ್ತು. ಆದರೆ ಅದು ಏನೆಂದು ಸ್ಪಷ್ಟವಾಗಲಿಲ್ಲ. ತಕ್ಷಣ ಕಾರ್ಯಾಚರಣೆ ಆರಂಭಿಸಿ, ಸುಖೋಯ್‌ 30 ವಿಮಾನದ ಮೂಲಕ ಅದನ್ನು ಹೊಡೆದುರುಳಿಸಲಾಯಿತು. ಆ ವಸ್ತುವಿನ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಐಎಎಫ್‌ ಮೂಲಗಳು ತಿಳಿಸಿವೆ.

ಜೈಪುರದಿಂದ ಸುಮಾರು 500 ಕಿ.ಮೀ ದೂರದಲ್ಲಿರುವ ಬಾರ್ಮೇರ್‌ ಜಿಲ್ಲೆಯ ಹಳ್ಳಿಯೊಂದರ ಬಳಿ ಘಟನೆ ನಡೆದಿದೆ. ಕಾರ್ಯಾಚರಣೆ ನಂತರ ಆಕಾಶದಿಂದ ಲೋಹದ ತುಣುಕುಗಳು ಉದುರುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಸಿ.ಸಿ ಟಿ.ವಿ ಕ್ಯಾಮೆರಾ ದೃಶ್ಯದಲ್ಲಿ ಶಂಕಿತ ಉಗ್ರರು: ಶಂಕಿತ ಉಗ್ರನೊಬ್ಬ ಏಳರಿಂದ ಎಂಟು ಮಂದಿಯ ತಂಡದೊಂದಿಗೆ ಇರುವ ಸಿ.ಸಿ ಟಿ.ವಿ ಕ್ಯಾಮೆರಾ ದೃಶ್ಯಾವಳಿ
ಯನ್ನು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕರ ಕಚೇರಿ ಸಾಮಾಜಿಕ ಮಾಧ್ಯಮ ವಾಟ್ಸ್  ಆ್ಯಪ್ ಬಿಡುಗಡೆ ಮಾಡಿದೆ. ಜತೆಗೆ ದೃಶ್ಯದಲ್ಲಿರುವ ಶಂಕಿತರ ಬಗ್ಗೆ ಸುಳಿವು ದೊರೆತಲ್ಲಿ ಮಾಹಿತಿ ನೀಡಿ ಎಂದು ಸಾರ್ವಜನಿಕರನ್ನು ಕೋರಿದೆ. ಅಲ್ಲದೆ ಈ ಬಗ್ಗೆ ರಾಜ್ಯದ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.

ಈಚೆಗೆ ಉತ್ತರಾಖಂಡದ  ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಹೀಗಾಗಿ ಈ ದೃಶ್ಯಾವಳಿ ಮಹತ್ವ ಪಡೆದುಕೊಂಡಿದೆ.

ಗಾಬರಿಗೆ ಕಾರಣವಾದ ಚೀಲ
ಪಠಾಣ್‌ಕೋಟ್‌ (ಪಿಟಿಐ):
ಈ ತಿಂಗಳ ಆರಂಭದಲ್ಲಿ ಉಗ್ರರ ದಾಳಿಯಿಂದಾಗಿ ಪೊಲೀಸರು ಮತ್ತು ಭದ್ರತಾ ಪಡೆ ಕಟ್ಟೆಚ್ಚರದಲ್ಲಿರುವ ಪಠಾಣ್‌ಕೋಟ್‌ ರೈಲು ನಿಲ್ದಾಣದಲ್ಲಿ ಮಂಗಳವಾರ ವಾರಸುದಾರರಿಲ್ಲದ ಚೀಲವೊಂದು ಪತ್ತೆಯಾಗಿ ಆತಂಕದ ಕ್ಷಣಗಳು ಎದುರಾದವು.

ತಕ್ಷಣವೇ ನಿಲ್ದಾಣದಲ್ಲಿದ್ದ ಜನರನ್ನು ತೆರವು ಮಾಡಲಾಯಿತು. ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು ಮತ್ತು ಕೆಲವು ರೈಲುಗಳನ್ನು ಬೇರೆ ಮಾರ್ಗಗಳ ಮೂಲಕ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಬ್‌ ನಿಷ್ಕ್ರಿಯ ದಳ ಮತ್ತು ಶ್ವಾನದಳವನ್ನು ಸ್ಥಳಕ್ಕೆ ಕರೆಸಲಾಯಿತು. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚೀಲದಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಪಠಾಣ್‌ಕೋಟ್‌ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಕೆ. ಬಕ್ಷಿ ತಿಳಿಸಿದ್ದಾರೆ. ಜ. 2ರಂದು ಪಠಾಣ್‌ಕೋಟ್‌ ಮೇಲೆ ಉಗ್ರರ ದಾಳಿ ನಡೆದ ನಂತರ ಪಂಜಾಬ್‌ನಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.