ADVERTISEMENT

ಗರಿಷ್ಠ ₨ 61 ಲಕ್ಷ ವೇತನ

ಐಐಎಂಬಿ ಕ್ಯಾಂಪಸ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2014, 19:30 IST
Last Updated 17 ಫೆಬ್ರುವರಿ 2014, 19:30 IST

ಬೆಂಗಳೂರು: ‘ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (ಐಐಎಂಬಿ) ನಿರ್ವಹಣಾ ಸ್ನಾತಕೋತ್ತರ ಪದವಿ ಕಾರ್ಯಕ್ರಮದ  ವಿದ್ಯಾರ್ಥಿಗಳ  ಕ್ಯಾಂಪಸ್ ಆಯ್ಕೆಯಲ್ಲಿ   ಈ ಬಾರಿಯ ಗರಿಷ್ಠ ವೇತನ ವಾರ್ಷಿಕ ₨ 61.29 ಲಕ್ಷ’ ಎಂದು  ಐಐಎಂಬಿ ಉದ್ಯೋಗ ಅಭಿವೃದ್ಧಿ ಸೇವೆಗಳ ಮುಖ್ಯಸ್ಥ ಪ್ರೊ.ಸಂಕರ್ಶನ್ ಬಸು ಹೇಳಿದರು.

ಐಐಎಂಬಿ ಸೋಮವಾರ ಏರ್ಪಡಿಸಿದ್ದ ಅಂತಿಮ ಸುತ್ತಿನ ಕ್ಯಾಂಪಸ್ ಆಯ್ಕೆ ಕುರಿತ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿ ಮತ್ತು ಔದ್ಯೋಗಿಕ ಸಂಸ್ಥೆಗಳ ಹಿತಾಸಕ್ತಿಗಾಗಿ ಅವರ  ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಬಾರದೆಂದು ನಿಯಮ ರೂಪಿಸಲಾಗಿದೆ. ಹೀಗಾಗಿ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದರು.

‘ನಿರ್ವಹಣಾ ವಲಯದ ಸಂಸ್ಥೆಗಳು ಈ ಬಾರಿ ಹೆಚ್ಚಿನ ವೇತನ
ನೀಡುತ್ತಿವೆ. ಆಯ್ಕೆಯಾದ ವಿದ್ಯಾರ್ಥಿ­ಗಳ ಸರಾಸರಿ ವಾರ್ಷಿಕ ವೇತನ ₨ 19.5 ಲಕ್ಷ. ಇದು ಕಳೆದ ಬಾರಿಗಿಂತ ₨ 2.1 ಲಕ್ಷ ಹೆಚ್ಚು. ಉದ್ಯೋಗದ ಅನುಭವ ಇರುವವರೂ ಐಐಎಂಬಿ ಪದವಿ ಪಡೆಯುವುದರಿಂದ ಅನುಭವಿಗಳು ಮತ್ತು ಹೊಸಬರ  ವೇತನದಲ್ಲಿ ಹೆಚ್ಚಿನ
ಅಂತರ ಉಂಟಾಗುತ್ತದೆ’ ಎಂದರು.

‘2014 ನೇ ಸಾಲಿನ ಕ್ಯಾಂಪಸ್‌ ಆಯ್ಕೆಯಲ್ಲಿ 388 ವಿದ್ಯಾರ್ಥಿಗಳು  ಭಾಗವಿಸಿದ್ದರೆ, ದೇಶ–ವಿದೇಶಗಳ 150 ಕ್ಕೂ ಹೆಚ್ಚು ಸಂಸ್ಥೆಗಳಿಂದ 425 ಉದ್ಯೋಗವಕಾಶಗಳಿದ್ದವು. ಹೆಚ್ಚಿನ ವಿದ್ಯಾಭ್ಯಾಸ ಮತ್ತು ಹಿಂದಿನ ಉದ್ಯೋಗವನ್ನೇ ಮುಂದುವರೆಸುವ ಉದ್ದೇಶದಿಂದ ಇಬ್ಬರು ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆಯಿಂದ ಹಿಂದೆ ಸರಿದಿದ್ದು ಉಳಿದ 386 ಮಂದಿ ಉದ್ಯೋಗ ಪಡೆದಿದ್ದಾರೆ’ ಎಂದರು.

ಐಐಎಂಬಿ ಉದ್ಯೋಗ ಅಭಿವೃದ್ಧಿ ಸೇವೆಗಳ ವಿಭಾಗದ ಮುಖ್ಯಸ್ಥೆ
ಸಪ್ನಾ ಅಗರವಾಲ್ ಮಾತನಾಡಿ, ‘ಈ ಬಾರಿ 91 ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಉದ್ಯೋಗ ಸಿಕ್ಕಿದೆ. ಅಸೆಂಚರ್ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಸಂಸ್ಥೆ 13, ಅಮೆಜಾನ್, ಮೈಕ್ರೋಸಾಫ್ಟ್ ಮತ್ತು ಗೂಗಲ್ ಸಂಸ್ಥೆಗಳು ತಲಾ 11 ಮತ್ತು ನಾರಾಯಣ ಹೆಲ್ತ್‌ ಸಿಟಿ 6   ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿವೆ. 9 ವಿದ್ಯಾರ್ಥಿಗಳು ಭಾರತದಲ್ಲಿಯೇ  ಸಾಮಾಜಿಕ ಸೇವಾ ವಲಯದ ಉದ್ಯೋಗಗಳನ್ನು ಆಯ್ಕೆ ಮಾಡಿ ಕೊಂಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.