ಶ್ರೀನಗರ (ಪಿಟಿಐ): ಗರ್ಭಿಣಿಯರ ಆರೋಗ್ಯ ರಕ್ಷಣೆ ಮತ್ತು ಆರೈಕೆಗಾಗಿ ಹೊಸ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದೆ. ಇದರಡಿ ಹೆರಿಗೆಗಿಂತ 6-7 ತಿಂಗಳ ಮೊದಲಿನಿಂದಲೇ ಗರ್ಭಿಣಿಯ ಚಿಕಿತ್ಸೆ, ಔಷಧ, ಆಸ್ಪತ್ರೆ ಪ್ರಯಾಣ ಮತ್ತು ಆಹಾರದ ವೆಚ್ಚವನ್ನು ಸರ್ಕಾರ ಭರಿಸಲಿದೆ.
`ಎಂಟು ವರ್ಷಗಳ ಹಿಂದೆ ಜಾರಿಗೆ ತರಲಾದ ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನೆಯ ಅಡಿಯಲ್ಲಿ ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ಮಾತ್ರ ಹಣಕಾಸಿನ ನೆರವು ದೊರೆಯುತ್ತಿತ್ತು. ಆದರೆ, ಹೊಸ ಯೋಜನೆಯಲ್ಲಿ ಗರ್ಭಿಣಿಗೆ ಉಚಿತ ಚಿಕಿತ್ಸೆ ನೀಡಲಾಗುವುದು.
ಚಿಕಿತ್ಸೆಗೆಗಾಗಿ ಆಸ್ಪತ್ರೆಗೆ ಬರಲು ಮತ್ತು ಮನೆಗೆ ಹಿಂದಿರುಗಲು ತಗಲುವ ಪ್ರಯಾಣ ವೆಚ್ಚವನ್ನೂ ಆರೋಗ್ಯ ಸಚಿವಾಲಯ ಭರಿಸಲಿದೆ' ಎಂದು ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಇದಲ್ಲದೆ, ನವಜಾತ ಶಿಶುವಿಗೆ ಬರಬಹುದಾದ ಕಾಯಿಲೆಗಳ ಚಿಕಿತ್ಸಾ ವೆಚ್ಚವೂ ಇದರ ವ್ಯಾಪ್ತಿಗೆ ಬರುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.