ADVERTISEMENT

ಗಲೀಜು ಸ್ಥಳದಲ್ಲಿ ಸಂತಾನಶಕ್ತಿಹರಣ ಚಿಕಿತ್ಸೆ :ಸುಪ್ರೀಂಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ದೇಶದ ವಿವಿಧ ಭಾಗಗಳಲ್ಲಿ ಸ್ವಚ್ಛತೆಯ ಕೊರತೆ ಇರುವ ಸ್ಥಳಗಳಲ್ಲಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿ ಜನರ ಜೀವಕ್ಕೆ ಅಪಾಯ ಒಡ್ಡಲಾಗುತ್ತಿದೆ ಎಂಬ ದೂರಿನ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸೂಚಿಸಿದೆ.

ನ್ಯಾಯಮೂರ್ತಿ ಆರ್. ಎಂ. ಲೋಧಾ ಮತ್ತು ಎಚ್. ಎಲ್. ಗೋಖಲೆ ಅವರನ್ನು ಒಳಗೊಂಡ ನ್ಯಾಯಪೀಠವು ಎಂಟು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.ಬಿಹಾರದಲ್ಲಿ ಬ್ಯಾಟರಿ ಬೆಳಕಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ ಮತ್ತು ಸೂಕ್ತ ತರಬೇತಿ ಪಡೆಯದವರು ಅರಿವಳಿಕೆ ಮದ್ದುಗಳನ್ನು ನೀಡುತ್ತಾರೆ ಎಂದು ಅರ್ಜಿದಾರರಾದ ದೇವಿಕಾ ಬಿಸ್ವಾಸ್ ಪರ ವಾದಿಸಿದ ವಕೀಲ ಕೊಲಿನ್  ಗೊನ್ಸಾಲ್ವೆಸ್ ದೂರಿದರು.

ಬಿಹಾರ ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡಿರುವ ಸ್ವಯಂಸೇವಾ ಸಂಸ್ಥೆಯೊಂದು ಒಂದು ತಾಸಿನಲ್ಲಿ 60 ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿರುವ ಉದಾಹರಣೆ ಇದೆ ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದರು.

ಶೀಘ್ರ ಮಸೂದೆ: ಪಾಯಖಾನೆಗಳನ್ನು ಜಾಡಮಾಲಿಗಳ ಕೈಯಲ್ಲಿ ಸ್ವಚ್ಛ ಮಾಡುವ ಪದ್ಧತಿಯನ್ನು ನಿಷೇಧಿಸುವ ಮಸೂದೆಯನ್ನು ಶೀಘ್ರದಲ್ಲಿಯೇ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್‌ಗೆ ಸೋಮವಾರ ತಿಳಿಸಲಾಯಿತು.

9 ವರ್ಷಗಳ ಹಿಂದೆ ಈ ವಿಚಾರವಾಗಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಹರನ್ ರಾವಲ್ ಅವರು ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ನೇತೃತ್ವದ ಪೀಠಕ್ಕೆ ಈ ವಿಷಯ ತಿಳಿಸಿದ್ದು, ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುತ್ತದೆ ಎಂದು ತಮಗೆ ಲಿಖಿತವಾಗಿ ತಿಳಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.