ADVERTISEMENT

ಗಿರ್‌ ಅಭಯಾರಣ್ಯದ ಬಳಿ ಗಣಿಗಾರಿಕೆಗೆ ಪರಿಸರ ಸಚಿವಾಲಯದಿಂದ ಹಸಿರು ನಿಶಾನೆ

ಏಜೆನ್ಸೀಸ್
Published 28 ಮೇ 2018, 11:09 IST
Last Updated 28 ಮೇ 2018, 11:09 IST
ಗಿರ್‌ ಅಭಯಾರಣ್ಯದ ಬಳಿ ಗಣಿಗಾರಿಕೆಗೆ ಪರಿಸರ ಸಚಿವಾಲಯದಿಂದ ಹಸಿರು ನಿಶಾನೆ
ಗಿರ್‌ ಅಭಯಾರಣ್ಯದ ಬಳಿ ಗಣಿಗಾರಿಕೆಗೆ ಪರಿಸರ ಸಚಿವಾಲಯದಿಂದ ಹಸಿರು ನಿಶಾನೆ   

ನವದೆಹಲಿ: ಗುಜರಾತಿನಲ್ಲಿರುವ ಗಿರ್‌ ಅಭಯಾರಣ್ಯ ಪ್ರದೇಶದ ಸಮೀಪ ಗಣಿಗಾರಿಕೆ ನಡೆಸಲು ಪರಿಸರ ಮತ್ತು ಅರಣ್ಯ ಸಚಿವಾಲಯದ ಸಮಿತಿಯು ಖಾಸಗಿ ಸಂಸ್ಥೆಯೊಂದಕ್ಕೆ ಅನುಮತಿ ನೀಡಿದೆ.

ಆಫ್ರಿಕನ್‌ ಸಿಂಹಗಳಿಗಿಂತ ಭಿನ್ನವಾಗಿರುವ ಏಷ್ಯಾ ಸಿಂಹಗಳನ್ನು ಹೊಂದಿರುವ ಪ್ರಪಂಚದ ಏಕೈಕ ಅಭಯಾರಣ್ಯವಾಗಿರುವ ಇಲ್ಲಿಂದ 6.25 ಕಿ.ಮೀ ದೂರದಲ್ಲಿರುವ ಸುಮಾರು 417 ಹೆಕ್ಟೇರ್‌ ಭೂ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ.

ಗಿರ್‌ ರಕ್ಷಿತ ಅರಣ್ಯ ಪ್ರದೇಶದ ’ಪರಿಸರ ಸೂಕ್ಷ್ಮವಲಯ’ ಕುರಿತ ಅಂತಿಮ ಅಧಿಸೂಚನೆಗೆ ಗುಜರಾತ್‌ ಹೈಕೋರ್ಟ್‌ ತಡೆ ನೀಡಿದ್ದರೂ ಗಣಿಗಾರಿಕೆಗೆ ಅನುಮತಿ ದೊರೆತಿದೆ.

ADVERTISEMENT

ಮಾರ್ಚ್‌ 27ರಂದು ನಡೆದಿದ್ದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ, ‘ನಿಬಂಧನೆಗಳು ಮತ್ತು ರಾಜ್ಯ ಮುಖ್ಯ ಅರಣ್ಯ ಅಧೀಕ್ಷಕರ ನಿಗದಿಪಡಿಸಿರುವ ವನ್ಯ ಜೀವಿಗಳ ತಗ್ಗಿಸುವಿಕೆಯ ಕ್ರಮ’ಗಳಿಗೆ ಅನುಗುಣವಾಗಿ ಗಿರ್‌ ಸಮೀಪದ ಸುಗಲಾ ಮತ್ತು ಜಗಾತಿಯಾ ಹಳ್ಳಿಗಳ 417.35 ಹೆಕ್ಟೇರ್‌ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಪ್ರಸ್ತಾಪವನ್ನು ಶಿಫಾರಸು ಮಾಡಿತ್ತು.

ಸದ್ಯ ಗಣಿಗಾರಿಕೆಗೆ ಅನುಮತಿ ನೀಡಿರುವ ಸಚಿವಾಲಯವು, ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳ ಸುತ್ತಲು ನಡೆಯುವ ಅಭಿವೃದ್ಧಿ ಚಟುವಟಿಕೆಗಳಿಂದಾಗಿ ಉಂಟಾಗುವ ಹಾನಿಗಳಿಗೆ ಕಡಿವಾಣ ಹಾಕಲು ಮಾರ್ಗದರ್ಶಿ ಸೂತ್ರಗಳನ್ನೂ ಪ್ರಕಟಿಸಿದೆ.

ಸಾಮಾನ್ಯವಾಗಿ ಪರಿಸರ ಸೂಕ್ಷ್ಮವಲಯ ಪ್ರದೇಶಗಳ ವಿಸ್ತೀರ್ಣವು 10 ಕಿ,ಮೀ ಆಗಿದೆ. ಆದರೆ, ರಕ್ಷಿತ ಅರಣ್ಯ ಪ್ರದೇಶ ಸುತ್ತಲೂ ಅರಣ್ಯ ಸೂಕ್ಷ್ಮವಲಯ ರೇಖೆಯನ್ನು ಗುರುತಿಸಲು ರಾಜ್ಯಗಳಿಗೆ ತಿಳಿಸಲಾಗಿದೆ. ನಿರ್ಮಾಣ ಸಾಮಾಗ್ರಿಗಳು ಮತ್ತು ಕಲುಷಿತ ನೀರು ಅಭಯಾರಣ್ಯಕ್ಕೆ ತಲುಪದಂತೆ ಎಚ್ಚರ ವಹಿಸುವಂತೆ ಸಂಸ್ಥೆಗಳಿಗೆ ತಿಳಿಸಲಾಗಿದೆ.

ಜೊತೆಗೆ ಗಣಿಗಾರಿಕೆ ಮುಗಿದ ನಂತರ ಅರಣ್ಯವನ್ನು ಅಭಿವೃದ್ಧಿಪಡಿಸುವ ಮತ್ತು ವನ್ಯಜೀವಿ ಸಂರಕ್ಷಣೆ ಯೋಜನೆಯನ್ನು ಕೈಗೊಳ್ಳಲು ಖಾತ್ರಿಪಡಿಸುವಂತೆ ಬಳಕೆದಾರ ಸಂಸ್ಥೆಗೆ ಸೂಚಿಸಿದೆ.

ಗಿರ್‌ ಅರಣ್ಯ ಪ್ರದೇಶದಲ್ಲಿ 291 ಹಳ್ಳಿಗಳನ್ನು ಒಳಗೊಂಡ ಸುಮಾರು 3.3 ಲಕ್ಷ ಹೆಕ್ಟೆರ್‌ ಭೂ ಪ್ರದೇಶವಿರುವ ಅರಣ್ಯ ಸೂಕ್ಷ್ಮವಲಯವನ್ನು 191 ಹಳ್ಳಿಗಳನ್ನು ಒಳಗೊಂಡಂತೆ 1.14 ಲಕ್ಷ ಹೆಕ್ಟೆರ್‌ಗಳಿಗೆ ಮಿತಿ ಗೊಳಿಸಬೇಕು ಎಂದು ಗುಜರಾತ್‌ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು.

ಸುಗಲಾ ಮತ್ತು ಜಗಾತಿಯಾ ಹಳ್ಳಿಗಳೂ ಸೂಕ್ಷ್ಮವಲಯದ ವ್ಯಾಪ್ತಿಯಲ್ಲಿದ್ದು, ಸದ್ಯ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸಿನಿಂದ ಕೈಬಿಡಲಾಗಿದೆ. ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ಗುಜರಾತ್‌ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದು, ಅಂತಿಮ ಅಧಿಸೂಚನೆ ಇನ್ನಷ್ಟೇ ಹೊರಬೀಳಲಿದೆ.

2017ರಲ್ಲಿ ನಡೆದಿರುವ ಸಮೀಕ್ಷೆಯಂತೆ ಇಲ್ಲಿ ಸುಮಾರು 650 ಏಷ್ಯಾ ಸಿಂಹಗಳಿವೆ.

ಅಕ್ರಮ ಗಣಿಗಾರಿಕೆಯ ಕಾರಣದಿಂದ ಸಿಂಹಗಳು ಪ್ರಾಣಾಪಾಯದಲ್ಲಿವೆ ಎಂದು ಈ ಹಿಂದೆ ಪ್ರಕಟವಾಗಿರುವ ಹಲವು ವರದಿಗಳೂ ಉಲ್ಲೇಖಿಸಿದ್ದವು.

ರಾಷ್ಟ್ರೀಯ ಹಸಿರು ಮಂಡಳಿಯಲ್ಲಿ ಇಂತಹದೇ ಪ್ರಕರಣವೊಂದನ್ನು ನಿರ್ವಹಿಸುತ್ತಿರುವ ಹಿರಿಯ ವಕೀಲ ರಿತ್ವಿಕ್‌ ದತ್ತಾ ಅವರು, ‘ಗಣಿಗಾರಿಕೆಗೆ ಅನುಮತಿ ನೀಡಿರುವುದರಿಂದ ಅವುಗಳ(ಸಿಂಹಗಳ) ಅಸ್ತಿತ್ವಕ್ಕೆ ಮಾರಕವಾಗಲಿದೆ’ ಎಂದಿದ್ದಾರೆ.

ಜೊತೆಗೆ, ‘ಸ್ಥಾಯಿ ಸಮಿತಿಯು ಪ್ರದೇಶಕ್ಕೆ ಭೇಟಿ ನೀಡದೆ ಅಥವಾ 417 ಕಿ.ಮೀ ವಿಸ್ತೀರ್ಣದ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ‘ಪರಿಸರ ಸೂಕ್ಷ್ಮವಲಯ’ದ ಮೇಲೆ ಆಗುವ ಪರಿಣಾಮವನ್ನು ಪರಿಶೀಲಿಸದೆ ಗಣಿಗಾರಿಕೆಗೆ ಅನುಮತಿಸಿರುವುದು ಅಚ್ಚರಿ ಮೂಡಿಸುತ್ತದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.‌

‘ವನ್ಯ ಜೀವಿಗಳು ಮತ್ತು ಆವಾಸಸ್ಥಾನಕ್ಕೆ ಹಾನಿಯಾಗುವಂತಿಲ್ಲ ಎಂದು ಗಣಿ ಕಂಪೆನಿಗೆ ವಿಧಿಸಿರುವ ಷರತ್ತುಗಳು ಹೇಳುತ್ತವೆ. ಈ ರೀತಿಯ ಪ್ರದೇಶಗಳಲ್ಲಿ ನಡೆಯುವ ಗಣಿ ಯೋಜನೆಗಳಿಂದ ಪರಿಸರಕ್ಕೆ ಹಾನಿಯಾಗದಿರುವುದು ಹೇಗೆ? ಪ್ರದೇಶವನ್ನು ತಪಾಸಣೆ ನಡೆಸುವ ಕುರಿತು ಸಚಿವಾಲಯ ಚಿಂತಿಸುವುದಿಲ್ಲ’ ಎಂದೂ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.