ಅಹ್ಮದಾಬಾದ್ (ಪಿಟಿಐ): ರಾಜ್ಯ ಸರ್ಕಾರ ಪ್ರಸಕ್ತ 2012-13ರ ಸಾಲಿನ ಬಜೆಟ್ ನಲ್ಲಿ ಅವಕಾಶ ಕಲ್ಪಿಸಿರುವುದರಿಂದ ಒಂಟೆಯ ಹಾಲನ್ನು ಸಂಸ್ಕರಿಸಿ ವಿವಿಧ ಹಾಲಿನ ಉತ್ಪನ್ನಗಳನ್ನು ತಯಾರಿಸುವ ಡೈರಿ ಘಟಕವೊಂದು ಪ್ರಥಮ ಬಾರಿ ಕಚ್ಛ್ ನಲ್ಲಿ ಇಷ್ಟರಲ್ಲೇ ಅಸ್ತಿತ್ವಕ್ಕೆ ಬರಲಿದೆ.
ಕಚ್ಛ್ ಜಿಲ್ಲಾ ಹಾಲು ಉತ್ಪಾಕರ ಸಹಕಾರ ಸಂಘವು ನಡೆಸುತ್ತಿರುವ ಶರದ್ ಡೈರಿಯು ಈ ಕುರಿತು ಸರ್ಕಾರಕ್ಕೆ ಈ ಮೊದಲು ಕೋರಿಕೆ ಸಲ್ಲಿಸಿತ್ತು.
ಒಂಟೆಯ ಹಾಲನ್ನು ಸಂಗ್ರಹಿಸಲು ಸ್ಥಳೀಯ ಒಂಟೆ ಸಾಕಣೆದಾರರ ಕಚ್ಛ್ ಊಂಟ್ ಉಚ್ಚೆರಕ್ ಮಾಲ್ದಾರಿ ಸಂಘಟನೆ (ಕೆಯುಯುಎಂಎಸ್)ಯು ರಚನೆಗೊಂಡಿದೆ. ಜೊತೆಗೆ ಕಚ್ಛ್ ನಲ್ಲಿರುವ ಸಹಜೀವನ ಎಂಬ ಸರ್ಕಾರೇತರ ಸೇವಾ ಸಂಸ್ಥೆಯು ಒಂಟೆ ಸಾಕಣೆದಾರರಲ್ಲಿ ಒಂಟೆ ಹಾಲಿನಲ್ಲಿ ಪೌಷ್ಠಿಕ ಅಂಶಗಳಿದ್ದು, ಹಾಲನ್ನು ಮಾರಾಟ ಮಾಡಿ ಹಣ ಗಳಿಸಬಹುದೆಂದು ತಿಳುವಳಿಕೆ ನೀಡಲಿದೆ.
ಇದಲ್ಲದೇ, ಅಮೂಲ್ ಎಂದು ಹೆಸರುವಾಸಿಯಾಗಿರುವ ಗುಜರಾತ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ (ಜಿಸಿಎಂಎಂಎಫ್), ಕೊಬ್ಬಿನ ಅಂಶ ಕಡಿಮೆ ಇರುವ, ಪೌಷ್ಠಿಕವಾದ ಒಂಟೆಯ ಹಾಲು ಮತ್ತು ಅದರ ಇತರ ಉತ್ಪನ್ನಗಳನ್ನು ಮಾರಾಟ ಮಾಡಲು ತಾತ್ವಿಕವಾಗಿ ತನ್ನ ಒಪ್ಪಿಗೆ ಸೂಚಿಸಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.