ADVERTISEMENT

ಗುಜರಾತ್ ಕೃಷಿ ಪ್ರಗತಿ: ಕಲಾಂ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 19:30 IST
Last Updated 11 ಫೆಬ್ರುವರಿ 2011, 19:30 IST

ಬಸ್ತಿ (ಉತ್ತರ ಪ್ರದೇಶ), (ಐಎಎನ್‌ಎಸ್): ಕಳೆದ ಆರು ವರ್ಷಗಳಲ್ಲಿ ಗುಜರಾತ್ ರಾಜ್ಯ ಆರ್ಥಿಕ ರಂಗದಲ್ಲಿ ಅತಿ ಹೆಚ್ಚು ಪ್ರಗತಿ ಸಾಧಿಸಿರುವ ಬಗ್ಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಶುಕ್ರವಾರ ಇಲ್ಲಿ ಮುಕ್ತಕಂಠದಿಂದ ಹೊಗಳಿದರು.

ರೈತರ ಸಮಾವೇಶದಲ್ಲಿ ಮಾತನಾಡಿದ ಅವರು ‘ಗುಜರಾತ್‌ನ ಸುಸ್ಥಿರ ಕೃಷಿ ಬೆಳವಣಿಗೆ ಕಳೆದ ಆರು ವರ್ಷಗಳಲ್ಲಿ ಶೇ 7ರಿಂದ ಶೇ 9ರಷ್ಟು ದಾಖಲಾಗಿದೆ. ರಾಷ್ಟ್ರದ ರಾಷ್ಟ್ರೀಯ ಸರಾಸರಿ ಬೆಳವಣಿಗೆ ಸುಮಾರು ಶೇ 2.5 ರಿಂದ ಶೇ 3 ಇದೆ. ಇದಕ್ಕಿಂತಲೂ ಗುಜರಾತ್ ಬಹಳ ಮುಂದೆ ಇದೆ’ ಎಂದು ಅವರು ನುಡಿದರು.

‘ಕೆಲವು ವಿನೂತನ ಕಾರ್ಯಕ್ರಮಗಳನ್ನು ಆರಂಭಿಸಿ ಮತ್ತು ಸರ್ಕಾರಿ ಸಂಸ್ಥೆಗಳು- ಖಾಸಗಿಯವರ ಸಹಭಾಗಿತ್ವದಡಿ ಗುಜರಾತ್ ಸರ್ಕಾರ ಉನ್ನತ ಪ್ರಗತಿ ಸಾಧಿಸಿದೆ’ ಎಂದು ಅಹಮದಾಬಾದ್‌ನ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಯ ಸಂಶೋಧಕರು ತಮಗೆ  ಹೇಳಿದ್ದಾರೆ ಎಂದೂ ಅವರು ತಿಳಿಸಿದರು.

ADVERTISEMENT

ಗುಜರಾತ್ ಸರ್ಕಾರದ ಕ್ರಮಗಳನ್ನು ವಿನೂತನ ಎಂದು ಬಣ್ಣಿಸಿದ ಅವರು, ‘ ಗ್ರಾಮೀಣ ಭಾಗದಲ್ಲಿ 24 ತಾಸು ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಯಿತು ಮತ್ತು ನೀರಾವರಿ ವ್ಯವಸ್ಥೆ ಸುಧಾರಣೆಗೆ ಕ್ರಾಂತಿಕಾರಕ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಇದರಿಂದ 20 ಸಾವಿರ ಹೆಕ್ಟೇರ್ ಭೂಮಿಯಯನ್ನು ಕೃಷಿ ಪ್ರದೇಶವಾಗಿ ರೂಪಿಸಲಾಯಿತು’ ಎಂದರು.

‘ದೂರದೃಷ್ಟಿಯೊಂದಿಗೆ ಬದ್ಧತೆಯುಳ್ಳ ನಾಯಕತ್ವ ಇದ್ದಾಗ ಮತ್ತು  ಅಭಿವೃದ್ಧಿಯ ಪಾಲುದಾರರನ್ನೆಲ್ಲ ಒಟ್ಟಿಗೆ ತರುವ ಸಾಮರ್ಥ್ಯವಿದ್ದಾಗ, ಆಹಾರ ಉತ್ಪಾದನೆಯಲ್ಲಿನ ಉತ್ಪಾದಕತೆ ಹೆಚ್ಚಲು ಸಾಧ್ಯ ಎಂಬ ಸಂದೇಶ ನೀಡಲು ನಾನು ಬಯಸುತ್ತೇನೆ’ ಎಂದು ಕಲಾಂ ನುಡಿದರು.

ನಂತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು,  ತಮ್ಮ ಪೋಷಕರು ಭ್ರಷ್ಟಾಚಾರದಲ್ಲಿ ತೊಡಗುವುದನ್ನು ಅವರ ಮಕ್ಕಳೇ ನಿಯಂತ್ರಿಸಬೇಕು. ಭ್ರಷ್ಟಾಚಾರದಿಂದ ರಾಷ್ಟ್ರವನ್ನು ಮುಕ್ತಗೊಳಿಸಲು ಇರುವ ಉತ್ತಮ ಮಾರ್ಗ ಇದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.