ADVERTISEMENT

ಗುರುತು ಪತ್ತೆಗೆ ಹಾಜರುಪಡಿಸಲು ನಿರ್ಧಾರ

ಪತ್ರಿಕಾ ಛಾಯಾಗ್ರಾಹಕಿ ಮೇಲಿನ ಸಾಮೂಹಿಕ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

ಮುಂಬೈ (ಪಿಟಿಐ): ಪತ್ರಿಕಾ ಛಾಯಾಗ್ರಾಹಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ತಕ್ಷಣವೇ ಗುರುತು ಪತ್ತೆಗೆ ಹಾಜರುಪಡಿಸಲು ಮುಂಬೈ ಪೊಲೀಸರು ಮುಂದಾಗಿದ್ದಾರೆ.

`ಎಲ್ಲ ಐದು ಜನ ಆರೋಪಿಗಳು ಸೆಪ್ಟೆಂಬರ್ 5ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಲಿದ್ದಾರೆ. ಪೊಲೀಸ್ ಕಸ್ಟಡಿ ಅವಧಿ ವಿಸ್ತರಿಸುವಂತೆ ಆರೋಪಿಗಳನ್ನು ಹಾಜರುಪಡಿಸಿದ ಕೊನೆಯ ದಿನ ನ್ಯಾಯಾಲಯದಲ್ಲಿ ಕೋರಲಾಗುವುದು' ಎಂದು ಮುಂಬೈ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

`ಒಂದುವೇಳೆ ಪೊಲೀಸ್ ಕಸ್ಟಡಿ ಅವಧಿ ವಿಸ್ತರಿಸದೇ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ, ಕೂಡಲೇ ಗುರುತು ಪತ್ತೆಗೆ ಹಾಜರುಪಡಿಸಲಾಗುವುದು' ಎಂದು ಹೇಳಿದ್ದಾರೆ.

ಪ್ರಕರಣದ ಸಂಬಂಧ ಸಾಧ್ಯವಾದಷ್ಟು ಶೀಘ್ರದಲ್ಲಿ ಎಲ್ಲ ರೀತಿಯ ಕಾನೂನು ಪ್ರತಿಕ್ರಿಯೆ ಪೂರ್ಣಗೊಳಿಸಿ, ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು. ಆರೋಪಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷೆಯಾಗುವಂತೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

ಆರೋಪಿಗಳು ನ್ಯಾಯಾಂಗ ಬಂಧನ ಮತ್ತು ಜೈಲಿನಲ್ಲಿದ್ದರೆ ಮಾತ್ರ ಅವರನ್ನು ಗುರುತು ಪತ್ತೆಗೆ ಹಾಜರುಪಡಿಸಲು ಕಾನೂನಿನಲ್ಲಿ ಅವಕಾಶ ಇದೆ. ಆದಕಾರಣ ಅಪರಾಧ ಎಸಗಿದ ಶಂಕಿತರೂ ಸೇರಿದಂತೆ ಇತರರನ್ನು ಸಂತ್ರಸ್ತೆ ಮತ್ತು ಪ್ರತ್ಯಕ್ಷದರ್ಶಿಗಳ ಎದುರು ಗುರುತು ಪತ್ತೆಗೆ ಹಾಜರುಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಆಗಸ್ಟ್ 22ರಂದು ಸಹದ್ಯೋಗಿಯೊಂದಿಗೆ ಕೆಲಸದ ನಿಮಿತ್ತ ಪರೇಲ್‌ನ ಶಕ್ತಿ ಮಿಲ್ಸ್‌ಗೆ ತೆರಳಿದ್ದ 23 ವರ್ಷ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು.

ಈ ಪ್ರಕರಣದಲ್ಲಿ ಐವರು ಆರೋಪಿಗಳ ಪೈಕಿ ಒಬ್ಬ ಬಾಲ ಆರೋಪಿ ಆಗಿದ್ದಾನೆ. ಶಿರಾಜ್ ರೆಹಮಾನ್ ಖಾನ್, ವಿಜಯ್ ಜಾಧವ್, ಖಾಸಿಂ ಬಂಗಾಳಿ ಮತ್ತು ಸಲೀಂ ಅನ್ಸಾರಿ ಪ್ರಕರಣದ ಇತರು ಆರೋಪಿಗಳು.

ಎಲ್ಲ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷೆನ್ 376(ಡಿ) (ಅತ್ಯಾಚಾರ), 342 (ಅಕ್ರಮವಾಗಿ ಕೂಡಿ ಹಾಕುವುದು), 506(2) (ಭಯ ಹುಟ್ಟಿಸುವುದು), 377 (ಅಸ್ವಾಭಾವಿಕ ಅಪರಾಧ), 201 (ಸಾಕ್ಷ್ಯಗಳ ನಾಶ), 120(ಬಿ) (ಅಪರಾಧ ಸಂಚು) ಮತ್ತು 34 (ನಿರ್ದಿಷ್ಟ ಉದ್ದೇಶದ ಅಪರಾಧ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.