ADVERTISEMENT

ಗುಲ್ಬರ್ಗಾ ಹತ್ಯಾಕಾಂಡ: ನರೇಂದ್ರ ಮೋದಿ ಆರೋಪ ಮುಕ್ತ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ಅಹಮದಾಬಾದ್ (ಐಎಎನ್‌ಎಸ್/ಪಿಟಿಐ): ಹತ್ತು ವರ್ಷಗಳ ಹಿಂದೆ ಗುಜರಾತ್‌ನಲ್ಲಿ ನಡೆದಿದ್ದ ಕೋಮುಗಲಭೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನಿಂದ ನೇಮಕಗೊಂಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುಲ್ಬರ್ಗಾ ಸೊಸೈಟಿ ಹತ್ಯಾಕಾಂಡ ಪ್ರಕರಣದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ದೋಷಮುಕ್ತಗೊಳಿಸಿ ವರದಿ ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಮೋದಿ ಹಾಗೂ ಇತರ 57 ಜನರ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಗಳು ಲಭ್ಯವಾಗಿಲ್ಲ ಎಂದು `ಎಸ್‌ಐಟಿ~ ಅಹಮದಾಬಾದ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ  ಫೆಬ್ರುವರಿ 28ರಂದು `ಪರಿಸಮಾಪ್ತಿ ವರದಿ~ ಸಲ್ಲಿಸಿತ್ತು. ಈ ವರದಿ ಆಧರಿಸಿ ಆದೇಶ ನೀಡಿರುವ ನ್ಯಾಯಾಧೀಶ ಎಂ. ಎಸ್. ಭಟ್, ತನಿಖಾಧಿಕಾರಿಗಳಿಗೆ ಮೋದಿ ಸೇರಿದಂತೆ ಯಾವ ಆರೋಪಿಗಳ ವಿರುದ್ಧವೂ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಹೇಳಿದರು.

ಹಾಗೆಂದು `ಎಸ್‌ಐಟಿ~ ಸಲ್ಲಿಸಿರುವ `ಪರಿಸಮಾಪ್ತಿ ವರದಿ~ಯನ್ನು ಕೋರ್ಟ್ ಸ್ವೀಕರಿಸಲಿದೆಯೇ ಇಲ್ಲವೇ ಎಂಬುದನ್ನು ನ್ಯಾಯಾಧೀಶರು ಮಂಗಳವಾರದ ವಿಚಾರಣೆಯ ಸಂದರ್ಭದಲ್ಲಿ ಹೇಳಲಿಲ್ಲ. ಸುಪ್ರೀಂಕೋರ್ಟ್ ಆದೇಶದನ್ವಯ, ಸಾಮಾಜಿಕ ನ್ಯಾಯದ ತತ್ವದ ಆಧಾರದಲ್ಲಿ ತನಿಖಾ ವರದಿಯನ್ನು ದೂರುದಾರರಾದ ಜಕಿಯಾ ಜಾಫ್ರಿ ಅವರಿಗೆ 30 ದಿನಗಳೊಳಗಾಗಿ ನೀಡುವಂತೆ `ಎಸ್‌ಐಟಿ~ಗೆ ಸೂಚಿಸಿದರು.

ತನಿಖಾ ವರದಿ, ಸಾಕ್ಷ್ಯಗಳ ಹೇಳಿಕೆ, ಸಂಬಂಧಿಸಿದ ದಾಖಲೆಗಳನ್ನು ಜಕಿಯಾ ಅವರಿಗೆ ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿತು. ಜಕಿಯಾ ಅವರ ವಾದವನ್ನು ಆಲಿಸಿದ ನಂತರ  `ಪರಿಸಮಾಪ್ತಿ ವರದಿ~ ಸ್ವೀಕರಿಸಬೇಕೇ ಇಲ್ಲವೇ ಎಂಬುದನ್ನು ಕೋರ್ಟ್ ನಿರ್ಧರಿಸಲಿದೆ.

ಹಿನ್ನೆಲೆ: ಗೋಧ್ರಾ ರೈಲು ನಿಲ್ದಾಣದಲ್ಲಿ ಕರಸೇವಕರು ಬೆಂಕಿಗೆ ಆಹುತಿಯಾದ ಘಟನೆಗೆ ಪ್ರತೀಕಾರವಾಗಿ 2002ರ ಫೆಬ್ರುವರಿ-ಮಾರ್ಚ್‌ನಲ್ಲಿ ಇಡೀ ಗುಜರಾತ್ ಕೋಮುಗಲಭೆಯಲ್ಲಿ ಹೊತ್ತಿ ಉರಿದಿತ್ತು.  2002ರ ಫೆಬ್ರುವರಿ 28ರಂದು ಉದ್ರಿಕ್ತ ಗುಂಪೊಂದು ಅಹಮದಾಬಾದ್‌ನ ಗುಲ್ಬರ್ಗಾ ಹೌಸಿಂಗ್ ಸೊಸೈಟಿಯಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಎಹಸಾನ್ ಜಾಫ್ರಿ ಸೇರಿ 69 ಜನರನ್ನು  ಜೀವಂತವಾಗಿ ದಹಿಸಿತ್ತು.

ಎಹಸಾನ್ ಜಾಫ್ರಿ ಅವರ ಪತ್ನಿ ಜಕಿಯಾ ಜಾಫ್ರಿ ಈ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿ ಹಾಗೂ ಗುಜರಾತ್ ಸರ್ಕಾರದ ಹಿರಿಯ ಅಧಿಕಾರಿಗಳ ಕೈವಾಡವಿದೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು.

ಗುಜರಾತ್ ಕೋಮುಗಲಭೆಯ ಹತ್ತು ವರ್ಷಗಳ ನಂತರ ಹೊರಬಿದ್ದಿರುವ ಈ ತನಿಖಾ ವರದಿ,  ನರೇಂದ್ರ ಮೋದಿ ಅವರಿಗೆ ಭಾರಿ ಸಮಾಧಾನ ನೀಡುವಂತಿದೆ.  ಮೋದಿ ವಿರುದ್ಧ ವಿಶೇಷ ತನಿಖಾ ತಂಡಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂಬ ವಿಚಾರವೂ ಈಗ ಅಧಿಕೃತವಾಗಿ ಹೊರಬಿದ್ದಂತಾಗಿದೆ. ಈ ಪ್ರಕರಣದಲ್ಲಿ  `ಎಸ್‌ಐಟಿ~ ಮೋದಿ ಅವರನ್ನು 9 ಗಂಟೆಗಳ ಕಾಲ ಪ್ರಶ್ನಿಸಿತ್ತು.

ರಾಘವನ್ ಹೇಳಿಕೆ: `ಎಸ್‌ಐಟಿ~ ವರದಿಯ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ತನಿಖಾ ತಂಡದ ಮುಖ್ಯಸ್ಥ ಆರ್.ಕೆ. ರಾಘವನ್, `ಎಸ್‌ಐಟಿ~ ವರದಿ ಪ್ರಶ್ನಿಸುವ ಅವಕಾಶ ದೂರುದಾರರಿಗೆ ಇದ್ದೇ ಇದೆ. ನಿರ್ದಿಷ್ಟ ಅರ್ಜಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳು ಲಭ್ಯವಿಲ್ಲ ಎಂದು ನಾವು ವರದಿ ನೀಡಿದ್ದೇವೆ ಹಾಗೂ ಪ್ರಕರಣ ಅಂತ್ಯಗೊಳಿಸಲು ಶಿಫಾರಸು ಮಾಡಿದ್ದೇವೆ ಎಂದಿದ್ದಾರೆ.

ನಾವು ನಮ್ಮ ಕರ್ತವ್ಯವನ್ನು ದಕ್ಷತೆಯಿಂದ ನಿಭಾಯಿಸಿದ್ದೇವೆ. ಈ ವರದಿಯ ಹಿನ್ನೆಲೆಯಲ್ಲಿ ತನಿಖಾ ತಂಡದ ಪ್ರಾಮಾಣಿಕತೆಯನ್ನು ಪ್ರಶ್ನಿಸಬಾರದು ಎಂದೂ ಹೇಳಿದ್ದಾರೆ. 

ಈ ಮಧ್ಯೆ, ಸುಪ್ರೀಂಕೋರ್ಟ್ ನೇಮಿಸಿದ್ದ ಕೋರ್ಟ್ ಸಹಾಯಕ ರಾಜು ರಾಮಚಂದ್ರನ್ `ಎಸ್‌ಐಟಿ~ ದಾಖಲೆಯ ಮೇಲೆ ತಾವು ನೀಡಿರುವ ಸ್ವತಂತ್ರ ವರದಿಯನ್ನು ಸಹ ದೂರುದಾರರಿಗೆ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ವರದಿಯ ವಿವರ ನೀಡಲು ಅವರು ನಿರಾಕರಿಸಿದ್ದಾರೆ.

ಗುಲ್ಬರ್ಗಾ ಸೊಸೈಟಿ ಹತ್ಯಾಕಾಂಡ ಪ್ರಕರಣದಲ್ಲಿ ವಿಸ್ತ್ರತ ತನಿಖೆ ನಂತರ `ಎಸ್‌ಐಟಿ~ ಕಳೆದ ವರ್ಷವೇ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿತ್ತು. ಕೋರ್ಟ್ ಸಹಾಯಕ ರಾಮಚಂದ್ರನ್ ಸಹ ತಮ್ಮ ವರದಿ ಸಲ್ಲಿಸಿದ್ದರು.

ಎರಡೂ ವರದಿಗಳನ್ನು  ಪರಿಶೀಲಿಸಿದ್ದ ನಂತರ ಸುಪ್ರೀಂಕೋರ್ಟ್ ಕಳೆದ ಸೆಪ್ಟೆಂಬರ್‌ನಲ್ಲಿ ನೀಡಿದ್ದ ಆದೇಶದಲ್ಲಿ, ವರದಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸಲ್ಲಿಸಲು ಸೂಚಿಸಿತ್ತು. ತನಿಖಾ ತಂಡಕ್ಕೆ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದಾದಲ್ಲಿ `ಪರಿಸಮಾಪ್ತಿ ವರದಿ~ಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ದೂರುದಾರರಿಗೆ ವರದಿಯ ಪ್ರತಿ ನೀಡಬೇಕು ಎಂದೂ ಸುಪ್ರೀಂಕೋರ್ಟ್ ಹೇಳಿತ್ತು.
 

ಜಕಿಯಾ ಜಾಫ್ರಿ ಪ್ರತಿಕ್ರಿಯೆ

ಈ ಪ್ರಕರಣಕ್ಕೆ ಎಸ್‌ಐಟಿ  ತೆರೆ ಎಳೆದಿರುವುದಕ್ಕೆ ಪ್ರತಿಕ್ರಿಯಿಸಿರುವ ಜಕಿಯಾ ಜಾಫ್ರಿ, ಇದರಿಂದ ತಮಗೆ ನಿರಾಸೆಯಾಗಿದ್ದು, ಜೀವ ಇರುವವರೆಗೆ ನ್ಯಾಯಕ್ಕಾಗಿ ಹೋರಾಡುವುದಾಗಿ ತಿಳಿಸಿದ್ದಾರೆ. `ನನಗೆ ದುಃಖವಾಗಿದೆ. ಆದರೆ, ನ್ಯಾಯ ಸಿಗುತ್ತದೆ ಎಂಬ ಆತ್ಮವಿಶ್ವಾಸವಿದೆ. ನಾನು ಬದುಕಿರುವವರೆಗೆ ಹೋರಾಡುತ್ತೇನೆ~ ಎಂದು ಜಕಿಯಾ ಹೇಳಿದರು. ಹತ್ಯಾಕಾಂಡ ನಡೆದ ದಿನ ತಮ್ಮ ಪತಿ ಎಹಸಾನ್ ಜಾಫ್ರಿ ಪೊಲೀಸರು ಮತ್ತು ಮುಖ್ಯಮಂತ್ರಿ ಕಚೇರಿಗೆ ದೂರವಾಣಿ ಕರೆ ಮಾಡುತ್ತಲೇ ಇದ್ದರು ಎಂದು ಜಕಿಯಾ ಹೇಳುತ್ತಾರೆ.
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.