ನವದೆಹಲಿ (ಪಿಟಿಐ): ಮೂರು ದಶಕಗಳಿಂದ ಅಸ್ಸಾಂ ರಾಜ್ಯವನ್ನು ಕಾಡುತ್ತಿರುವ `ಬಂಡುಕೋರರ~ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವಂತೆ ಸಂವಿಧಾನದ ನಿಯಮಗಳಿಗೆ ತಿದ್ದುಪಡಿ ತರಬೇಕೆಂಬ ಒತ್ತಾಯವೂ ಸೇರಿದಂತೆ 12 ಅಂಶಗಳ ಬೇಡಿಕೆಯುಳ್ಳ ಪಟ್ಟಿಯನ್ನು ಉಲ್ಫಾ ಕಾರ್ಯಕರ್ತರ ನಿಯೋಗ ಸೋಮವಾರ ಕೇಂದ್ರಕ್ಕೆ ಸಲ್ಲಿಸಿತು.
ಉಲ್ಫಾ ಸಂಘಟನೆ ಅಧ್ಯಕ್ಷ ಅರವಿಂದ ರಾಜ್‌ಖೋವಾ ನೇತೃತ್ವದ ನಿಯೋಗವು, ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಸೇರಿದಂತೆ ವಿವಿಧ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಿ, ತಮ್ಮ ಬೇಡಿಕೆಗಳನ್ನು ಸಲ್ಲಿಸಿತು.
`90 ನಿಮಿಷಗಳ ಕಾಲ ನಡೆದ ಚರ್ಚೆಯಲ್ಲಿ ಅಸ್ಸಾಂನಲ್ಲಿ ಶಾಂತಿ ಸ್ಥಾಪನೆ ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಕುರಿತು ಚರ್ಚಿಸಲಾಯಿತು. ಈ ಚರ್ಚೆಯ ಪ್ರಕ್ರಿಯೆಯನ್ನು ನಾವೆಲ್ಲ ಒಟ್ಟಾಗಿ ಮುಂದಕ್ಕೆ ಕೊಂಡೊಯ್ಯುತ್ತೇವೆ~ ಎಂದು ಉಲ್ಫಾ ಅಧ್ಯಕ್ಷ ರಾಜ್‌ಖೋವಾ ಸುದ್ದಿಗಾರರಿಗೆ ತಿಳಿಸಿದರು.
`ಇದೊಂದು ರಚನಾತ್ಮಕ ಮತ್ತು ಫಲಪ್ರದ ಭೇಟಿಯಾಗಿದ್ದು, ಉತ್ತಮ ಪ್ರಗತಿಗೆ ದಾರಿಯಾಗಿದೆ~ ಎಂದು ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ವಿವರಿಸಿದರು. ಉಲ್ಫಾ ನಿಯೋಗದಲ್ಲಿ ರಾಜು ಬರೌಹ, ಪ್ರಣತಿ ದೇಕಾ ಮತ್ತು ಮಿತಿಂಗ ಡೈಮರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.