ADVERTISEMENT

ಗೃಹ ಕಾರ್ಯದರ್ಶಿ ಮಟ್ಟದ ಮಾತುಕತೆ; ದಿನ ನಿಗದಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಉಭಯ ದೇಶಗಳ ಗೃಹ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗೆ ಹೊಸದಾಗಿ ದಿನ ನಿಗದಿಪಡಿಸುವಂತೆ ಭಾರತವು ಪಾಕಿಸ್ತಾನವನ್ನು ಕೇಳಿದೆ.

ಆಂತರಿಕ ಭದ್ರತೆಗೆ ಸಂಬಂಧಿಸಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಈ ತಿಂಗಳ 16ರಂದು ನಡೆಯಲಿರುವುದರಿಂದ ಪಾಕಿಸ್ತಾನ ಸಲಹೆ ನೀಡಿದಂತೆ ಆ ದಿನ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಪಾಕ್‌ಗೆ ತೆರಳಲು ಸಾಧ್ಯವಾಗುವುದಿಲ್ಲ ಎಂದು ಭಾರತ ತಿಳಿಸಿದೆ.

ಸಂಸತ್ತಿನ ಬಜೆಟ್ ಅಧಿವೇಶನ ಮೇ 22ರಂದು ಅಂತ್ಯಗೊಳ್ಳಲಿದ್ದು ಆನಂತರವೇ ಮಾತುಕತೆಗೆ ದಿನ ನಿಗದಿಪಡಿಸುವಂತೆ ಭಾರತ ಕೋರಿದೆ.

ಖಾಸಗಿ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದ ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಔತಣಕೂಟ ಏರ್ಪಡಿಸಿದ್ದರಿಂದ ಎರಡೂ ದೇಶಗಳ ಬಾಂಧವ್ಯ ಹೊಸರೂಪ ಪಡೆದಿದ್ದು, ಈ ಸಂದರ್ಭದಲ್ಲಿ ಗೃಹ ಕಾರ್ಯದರ್ಶಿ ಮಟ್ಟದ ದ್ವಿಪಕ್ಷೀಯ ಸಭೆ ನಡೆಸುವ ಪ್ರಸ್ತಾಪ ಬಂದಿದೆ.

ಮುಂಬೈ ದಾಳಿಯ ಸೂತ್ರಧಾರ ಹಫೀಜ್ ಸಯೀದ್ ಹಾಗೂ ಇತರ ಉಗ್ರರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಪ್ರಧಾನಿ ಸಿಂಗ್ ಪ್ರಸ್ತಾಪಿಸಿದಾಗ, `ಈ ವಿಚಾರದಲ್ಲಿ ಮತ್ತಷ್ಟು ಚರ್ಚೆ ಅವಶ್ಯ, ಗೃಹ ಕಾರ್ಯದರ್ಶಿಗಳ ಮಾತುಕತೆಯಲ್ಲಿ ಈ ಕುರಿತು ವಿಸ್ತ್ರತ ಚರ್ಚೆ ನಡೆಸಬಹುದು~ ಎಂದು ಜರ್ದಾರಿ ಹೇಳಿದರು ಎನ್ನಲಾಗಿದೆ. 

ಕಳೆದ ವರ್ಷದ ಡಿಸೆಂಬರ್ 22-23ರಂದು ಮಾತುಕತೆ ನಡೆಸುವಂತೆ ಭಾರತ ಪ್ರಸ್ತಾಪ ಮುಂದಿಟ್ಟಿತ್ತು. ಆ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಉದ್ಭವಿಸಿದ್ದ ಆಂತರಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ಪಾಕ್ ಮಾತುಕತೆಗೆ ಸಮ್ಮತಿ ಸೂಚಿಸಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.