ADVERTISEMENT

ಗೋಧ್ರಾ ಗಲಭೆ: ಧಾರ್ಮಿಕ ಕಟ್ಟಡಗಳ ಹಾನಿ ಬಗ್ಗೆ ನಿರ್ಲಕ್ಷ್ಯ- ಮೋದಿ ಸರ್ಕಾರಕ್ಕೆ ತರಾಟೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 9:35 IST
Last Updated 8 ಫೆಬ್ರುವರಿ 2012, 9:35 IST

ಅಹಮದಾಬಾದ್ (ಪಿಟಿಐ): ಗೋಧ್ರಾ ಘಟನೆಯ ಬಳಿಕ 2002ರಲ್ಲಿ ಸಂಭವಿಸಿದ ವ್ಯಾಪಕ ಹಿಂಸಾಚಾರ ಕಾಲದಲ್ಲಿ ಧಾರ್ಮಿಕ ಕಟ್ಟಡಗಳ ಹಾನಿಯನ್ನು ತಡೆಗಟ್ಟುವಲ್ಲಿ ತೋರಿದ ~ನಿಷ್ಕ್ರಿಯತೆ~ ಮತ್ತು ~ನಿರ್ಲಕ್ಷ್ಯ~ಕ್ಕಾಗಿ ಗುಜರಾತ್ ಹೈಕೋರ್ಟ್ ಬುಧವಾರ ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಹಂಗಾಮೀ ಮುಖ್ಯ ನ್ಯಾಯಮೂರ್ತಿ ಭಾಸ್ಕರ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು ರಾಜ್ಯದಲ್ಲಿ ಹಾನಿಗೊಳಗಾದ 500ಕ್ಕೂ ಹೆಚ್ಚು ಧಾರ್ಮಿಕ ಕಟ್ಟಡಗಳಿಗೆ ಪರಿಹಾರ ಘೋಷಿಸುತ್ತಾ ~ಇಂತಹ ಸ್ಥಳಗಳ ದುರಸ್ತಿ ಹಾಗೂ ಅವುಗಳಿಗೆ ಪರಿಹಾರ ಒದಗಿಸಲು ಸರ್ಕಾರವೇ ಹೊಣೆ~ ಎಂದು ಹೇಳಿತು.

ಗುಜರಾತಿನ ಇಸ್ಲಾಮಿಕ್ ಪರಿಹಾರ ಸಮಿತಿಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತ್ತು.

~ರಾಜ್ಯದಾದ್ಯಂತ ಧಾರ್ಮಿಕ ಸ್ಥಳಗಳ ಮೇಲೆ ನಡೆದ ವ್ಯಾಪಕ ದಾಳಿ ಮತ್ತು ಅವುಗಳಿಗೆ ಆದ ಹಾನಿಗೆ ಹಿಂಸಾಚಾರವನ್ನು ನಿಗ್ರಹಿಸುವಲ್ಲಿನ ಸರ್ಕಾರದ ಅಸಮರ್ಥತೆ, ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯವೇ ಕಾರಣ ಎಂದು ನ್ಯಾಯಾಲಯ ಹೇಳಿತು.

ಮನೆಗಳು ಮತ್ತು ವಾಣಿಜ್ಯ ಮಳಿಗೆಗಳಿಗೆ ಆದ ಹಾನಿಗೆ ಪರಿಹಾರ ನೀಡಿರುವ ಸರ್ಕಾರ ಧಾರ್ಮಿಕ ಕಟ್ಟಡಗಳ ಹಾನಿಗೂ ಪರಿಹಾರ ನೀಡಬೇಕು ಎಂದು ಪೀಠ ಹೇಳಿತು.

ತಮ್ಮ ತಮ್ಮ ಜಿಲ್ಲೆಗಳಲ್ಲಿ ಧಾರ್ಮಿಕ ಸ್ಥಳಗಳಿಂದ ಪರಿಹಾರಕ್ಕಾಗಿ ಅರ್ಜಿಗಳನ್ನು  ಪಡೆದು ಆ ಬಗ್ಗೆ ನಿರ್ಧರಿಸುವಂತೆ ರಾಜ್ಯದ 26 ಜಿಲ್ಲೆಗಳ ಪ್ರಧಾನ ನ್ಯಾಯಾಧೀಶರಿಗೆ ಹೈಕೋರ್ಟ್ ಸೂಚಿಸಿತು.

ತಮ್ಮ ನಿರ್ಧಾರಗಳನ್ನು ತನಗೆ ಕಳುಹಿಸಿಕೊಡುವಂತೆ ಸೂಚಿಸಿದ ಹೈಕೋರ್ಟ್ ಇದಕ್ಕೆ ಆರು ತಿಂಗಳುಗಳ ಗಡುವನ್ನೂ ನಿಗದಿ ಪಡಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.