ಆನಂದ್ (ಪಿಟಿಐ): ಗೋಧ್ರಾ ನಂತರದ ಗಲಭೆಗಳ ಕಾಲದಲ್ಲಿ ಒಡೆ ಗ್ರಾಮದಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಇಲ್ಲಿನ ಸೆಷನ್ಸ್ ನ್ಯಾಯಾಲಯವು ಸೋಮವಾರ 23 ಮಂದಿಯನ್ನು ತಪ್ಪಿತಸ್ತರು ಎಂದು ಘೋಷಿಸಿ, ಹಲವಾರು ಮಂದಿಯನ್ನು ಸಾಕ್ಷ್ಯಾಧಾರದ ಕೊರತೆ ಕಾರಣ ದೋಷಮುಕ್ತಿಗೊಳಿಸಿದೆ.
ಜಿಲ್ಲೆ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಪೂನಂ ಸಿಂಗ್ ಈ ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಶೀಘ್ರದಲ್ಲೇ ಪ್ರಕಟಿಸುವುದು.
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 23 ಮಂದಿ ಪಿರ್ವಾಲಿ ಭಗೋಲ್ ಪ್ರದೇಶದ ಒಡೆ ಗ್ರಾಮದಲ್ಲಿ 2002ರ ಮಾರ್ಚ್ 1ರಂದು ಮನೆಗೆ ಹಚ್ಚಲಾದ ಕಿಚ್ಚಿಗೆ ಸಿಕ್ಕಿ ಸಜೀವ ದಹನಗೊಂಡಿದ್ದರು. ಗೋಧ್ರಾ ರೈಲು ಹತ್ಯಾಕಾಂಡದ ಬಳಿಕ ಸಂಭವಿಸಿದ ಹಿಂಸಾಚಾರಗಳ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ 47ಯನ್ನು ಆರೋ[ಪಿಗಳನ್ನಾಗಿ ಹೆಸರಿಸಲಾಗಿತ್ತು. ಅವರ ಪೈಕಿ ಒಬ್ಬ ವಿಚಾರಣೆ ಕಾಲದಲ್ಲೇ ಮೃತನಾಗಿದ್ದ.
150ಕ್ಕೂ ಹೆಚ್ಚು ಮಂದಿ ಸಾಕ್ಷಿಗಳ ಪರೀಕ್ಷೆ ಮಾಡಲಾಗಿತ್ತು, 170ಕ್ಕೂ ಹೆಚ್ಚು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು ಎಂದು ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಪಿ.ಎನ್. ಪರ್ಮಾರ್ ಹೇಳಿದರು.
ಪ್ರಕರಣದ ವಿಚಾರಣೆ 2009ರ ಅಂತ್ಯದಲ್ಲಿ ಆರಂಭವಾಗಿತ್ತು. ವಿಚಾರಣೆ ಮುಕ್ತಾಯದ ಹಂತಕ್ಕೆ ಬಂದಿದ್ದಾಗ ವೈಯಕ್ತಿಕ ಕಾರಣಗಳನ್ನು ನೀಡಿ 2011ರ ಮೇ ತಿಂಗಳಲ್ಲಿ ನ್ಯಾಯಾಧೀಶರು ರಾಜೀನಾಮೆ ನೀಡಿದ್ದರು.
ನಂತರ ನ್ಯಾಯಾಧೀಶರಾಗಿ ಸಿಂಗ್ ಅವರನ್ನು ನೇಮಿಸಲಾಗಿತ್ತು. ಬಳಿಕ ಎಲ್ಲ ವಾದ ಪ್ರತಿವಾದಗಳನ್ನೂ ಆಕೆಯ ಮುಂದೆ ಸಂಪೂರ್ಣ ಹೊಸದಾಗಿಯೇ ಮಂಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.