ADVERTISEMENT

ಗೋವಾ ಬಿಜೆಪಿಗೆ ಶಾ ಮೇಲೆ ವಿಶ್ವಾಸ

ಪಿಟಿಐ
Published 4 ಮಾರ್ಚ್ 2018, 20:02 IST
Last Updated 4 ಮಾರ್ಚ್ 2018, 20:02 IST
ಗೋವಾ ಬಿಜೆಪಿಗೆ ಶಾ ಮೇಲೆ ವಿಶ್ವಾಸ
ಗೋವಾ ಬಿಜೆಪಿಗೆ ಶಾ ಮೇಲೆ ವಿಶ್ವಾಸ   

ಪಣಜಿ: ಕರ್ನಾಟಕ ಮತ್ತು ಗೋವಾ ನಡುವಣ ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಪರಿಹರಿಸಬಹುದು ಎಂಬ ವಿಶ್ವಾಸವನ್ನು ಗೋವಾ ಬಿಜೆಪಿ ವ್ಯಕ್ತಪಡಿಸಿದೆ.

ವಿವಾದದ ಬಗ್ಗೆ ಮಹದಾಯಿ ನೀರು ಹಂಚಿಕೆ ವಿವಾದ ನ್ಯಾಯಮಂಡಳಿಯಲ್ಲಿ ವಿಚಾರಣೆ ನಡೆಯುತ್ತಿದೆ.

ಈ ವಿವಾದಕ್ಕೆ ಶೀಘ್ರವೇ ಪರಿಹಾರ ದೊರೆಯಲಿದೆ. ಶಾ ಅವರು ಸಮಸ್ಯೆ ಬಗೆಹರಿಸುವ ಸಂಪೂರ್ಣ ವಿಶ್ವಾಸ ಇದೆ’ ಎಂದು ಗೋವಾ ಬಿಜೆಪಿ ಅಧ್ಯಕ್ಷ ವಿನಯ್‌ ತೆಂಡುಲ್ಕರ್ ಹೇಳಿದ್ದಾರೆ.

ADVERTISEMENT

‘ನಮಗೆ ನ್ಯಾಯಮಂಡಳಿಯಲ್ಲಿಯೂ ವಿಶ್ವಾಸವಿದೆ. ನ್ಯಾಯಮಂಡಳಿಯ ಆದೇಶವನ್ನು ಎದುರು ನೋಡುತ್ತಿದ್ದೇವೆ’ ಎಂದೂ ಅವರು ತಿಳಿಸಿದ್ದಾರೆ.

ಸೌಹಾರ್ದಯುತ ಪರಿಹಾರಕ್ಕೆ ಗೋವಾ ಸಿದ್ಧವಿದೆ. ಆದರೆ, ಮಹದಾಯಿ ನೀರನ್ನು ಬೇರೆಡೆಗೆ ಹರಿಸುವುದಕ್ಕೆ ವಿರೋಧ ಇದೆ ಎಂದು ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸುವುದಾಗಿ ಕರ್ನಾಟಕದಲ್ಲಿನ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಶಾ ಹೇಳಿದ್ದರು.

ಕರ್ನಾಟಕಕ್ಕೆ ಕುಡಿಯುವ ನೀರು ನೀಡುವುದಕ್ಕೆ ಅಭ್ಯಂತರ ಇಲ್ಲ ಮತ್ತು ಮಾತುಕತೆಗೂ ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರ‍್ರೀಕರ್‌ ಹಿಂದೊಮ್ಮೆ ಹೇಳಿದ್ದರು. ಆದರೆ, ಯಾವುದೇ ಕಾರಣಕ್ಕೂ ನೀರು ಹರಿಸಲು ಅವಕಾಶ ಕೊಡುವುದಿಲ್ಲ ಎಂದು ಬಿಜೆಪಿಯ ಮಿತ್ರ ಪಕ್ಷ ಗೋವಾ ಫಾರ್ವರ್ಡ್‌ ಪಾರ್ಟಿ ಪ್ರತಿಕ್ರಿಯೆ ನೀಡಿತ್ತು.

ಮಹದಾಯಿಯ ಉಪನದಿಯ ನೀರನ್ನು ಬೇರೆಡೆಗೆ ಹರಿಸುವುದಕ್ಕಾಗಿ ಕರ್ನಾಟಕ ನಿರ್ಮಿಸುತ್ತಿದ್ದ ಕಾಲುವೆ ಕಾಮಗಾರಿಗೆ ಸುಪ್ರೀಂ ಕೋರ್ಟ್‌ ಕಳೆದ ವರ್ಷ ತಡೆ ನೀಡಿತ್ತು. ಆದರೆ, ಈ ಕಾಮಗಾರಿ ಮತ್ತೆ ಆರಂಭಗೊಂಡಿದೆ ಎಂಬುದನ್ನು ತೋರಿಸುವ ಸಾಕ್ಷ್ಯ ತನ್ನಲ್ಲಿದೆ ಎಂದು ಗೋವಾ ಇತ್ತೀಚೆಗೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.