ADVERTISEMENT

ಗೋವಾ ಶಾಸನ ಸಭೆ: ಅಕ್ರಮ ಗಣಿಗಾರಿಕೆ- ಬಿಸಿಬಿಸಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ಪಣಜಿ (ಪಿಟಿಐ): ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಅನಗತ್ಯವಾಗಿ ಯಾರ ಹೆಸರನ್ನೂ ಅಥವಾ ಯಾರನ್ನೂ ಅಪಾಧಿತರನ್ನಾಗಿಸುವುದು ಬೇಡ, ಇದರಿಂದ ಗೋವಾ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಸ್ಪೀಕರ್ ಪ್ರತಾಪ್‌ಸಿಂಗ್ ರಾಣೆ ಶುಕ್ರವಾರ ಶಾಸನ ಸಭೆಯಲ್ಲಿ ಸೂಚಿಸಿದರು.

ಅಕ್ರಮ ಗಣಿಗಾರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು. ಆದರೆ ಯಾರದ್ದೇ ಹೆಸರನ್ನು ಅನವಶ್ಯಕವಾಗಿ ಎತ್ತ ಬೇಡಿ ಎಂದು ಅವರು ಶಾಸಕರಿಗೆ ತಾಕೀತು ಮಾಡಿದರು.

4 ಸಾವಿರ ಕೋಟಿ ಅಕ್ರಮ ಗಣಿಗಾರಿಕೆಯ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಶೂನ್ಯ ವೇಳೆಯಲ್ಲಿ ರಾಣೆ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವ ಅಗತ್ಯ ಇದೆ ಎಂದರು.

ವಾಕ್ಸಮರ: ತನಿಖಾ ಸಮಿತಿಯ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಮನೋರ್ ಪರಿಕ್ಕರ್ ಹಾಗೂ ಅಕ್ರಮ ಗಣಿಗಾರಿಕೆಯಲ್ಲಿ ಪಾಲುದಾರರೆಂದು ಆರೋಪಿಸಲಾಗಿರುವ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರ ನಡುವೆ ಮಾತಿನ ಸಮರ ನಡೆಯಿತು.

ವಿನಾಕಾರಣ ಅಕ್ರಮ ಗಣಿಗಾರಿಕೆಯಲ್ಲಿ ತಮ್ಮ ಹೆಸರನ್ನು ಎಳೆದು ತರಲಾಗಿದೆ ಎಂದು ವಿಶ್ವಜಿತ್ ರಾಣೆ ದೂರಿದರು. ಅಷ್ಟೇ ಅಲ್ಲದೆ ಅಕ್ರಮ ಗಣಿಗಾರಿಕೆಯಲ್ಲಿ ಬಿಜೆಪಿ ಮುಖಂಡರದ್ದೇ ಪಾಲುಗಾರಿಕೆ ಹೆಚ್ಚು ಎಂದೂ ಅವರು ಆರೋಪಿಸಿದರು.

ನಿಯಮಗಳ ಉಲ್ಲಂಘನೆ ಮಾಡಿರುವ ಕಂಪೆನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಕಾರದ ನಿಯಮಗಳನ್ನು ಸಮರ್ಪಕವಾಗಿ ಅನುಸರಿಸಲಾಗಿದೆಯೇ ಎಂಬುದನ್ನೂ ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಪರಿಕ್ಕರ್ ಸಲಹೆ ಮಾಡಿದರು.

ಅದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ದಿಗಂಬರ ಕಾಮತ್, ನಿಯಮ ಉಲ್ಲಂಘನೆ ಮಾಡಿರುವ ಕಂಪೆನಿಗಳ ಗಣಿಗಾರಿಕೆಯ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.