ADVERTISEMENT

ಗ್ರಾಹಕರನ್ನು ಶೋಷಿಸುವ ಆರ್ಥಿಕ ನಿಯಂತ್ರಣ ಕೂಟ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST
ಗ್ರಾಹಕರನ್ನು ಶೋಷಿಸುವ ಆರ್ಥಿಕ ನಿಯಂತ್ರಣ ಕೂಟ
ಗ್ರಾಹಕರನ್ನು ಶೋಷಿಸುವ ಆರ್ಥಿಕ ನಿಯಂತ್ರಣ ಕೂಟ   

ಗರಿಷ್ಠ ಪ್ರಮಾಣದ ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ ನಿಯಂತ್ರಣ ಕೂಟ
(cartel)ರಚಿಸಿಕೊಂಡಿದ್ದಕ್ಕೆ ದೇಶದ 11 ಪ್ರಮುಖ ಬ್ರಾಂಡೆಡ್ ಸಿಮೆಂಟ್ ಕಂಪೆನಿಗಳಿಗೆ ರೂ 6307 ಕೋಟಿಯಷ್ಟು ಭಾರಿ ಮೊತ್ತದ ದಂಡ ವಿಧಿಸಿರುವುದು ಇತ್ತೀಚೆಗೆ ದೊಡ್ಡ ಸುದ್ದಿಯಾಗಿತ್ತು.

ಭಾರತೀಯ ಸ್ಪರ್ಧಾತ್ಮಕ ಆಯೋಗವು
(competition commission of India CCI)  ಈ ಕ್ರಮ ಕೈಗೊಂಡಿದೆ. ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಗುಣಮಟ್ಟದ ಉತ್ಪನ್ನ ದೊರಕುವಂತೆ ಮಾಡುವುದು, ಉತ್ಪಾದನೆ, ಬೆಲೆ ನಿಗದಿ, ಮಾರಾಟ ಮತ್ತಿತರ ಸಂಗತಿಗಳ ಮೇಲೆ ಹತೋಟಿ ಇಡಲು ಉತ್ಪಾದಕರು ಕೂಟ ರಚಿಸಿಕೊಳ್ಳುವುದನ್ನು ತಡೆಯಲು `ಸ್ಫರ್ಧಾತ್ಮಕ ಆಯೋಗ~ ಅಸ್ತಿತ್ವಕ್ಕೆ ಬಂದಿದೆ.  ಇದಕ್ಕೂ ಮೊದಲು `ಏಕಸ್ವಾಮ್ಯ ಮತ್ತು ನಿರ್ಬಂಧಿತ ವ್ಯಾಪಾರ ವಹಿವಾಟು ಆಯೋಗವು

(Monopolies and Restri­ctive Trade Practices Commission) ಈ ಕಾರ್ಯ ನಿರ್ವಹಿಸುತ್ತಿತ್ತು.ಸಿಮೆಂಟ್ `ನಿಯಂತ್ರಣ ಕೂಟ~ದ ವಿರುದ್ಧ `ಸಿಸಿಐ~ ಕೈಗೊಂಡ ದಂಡ ವಿಧಿಸುವ ಕ್ರಮ ಮೊದಲ ಹೆಜ್ಜೆಯಷ್ಟೆ. ಇಂತಹ `ಆರ್ಥಿಕ ಕೂಟ~ಗಳ ಅಸ್ತಿತ್ವ ಸಾಬೀತುಪಡಿಸುವುದು ಕಠಿಣವಾಗಿದೆ. ಈ ಪ್ರಕರಣದಲ್ಲಿ ಸಾಂದರ್ಭಿಕ ಸಾಕ್ಷ್ಯ ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ.

ಸಿಮೆಂಟ್ `ನಿಯಂತ್ರಣ ಕೂಟ~ ಅಸ್ತಿತ್ವ ಸಾಬೀತುಪಡಿಸುವ ಬಗ್ಗೆ `ಸಿಸಿಐ~ ಉತ್ಪಾದನೆ, ಉತ್ಪಾದನಾ ಸಾಮರ್ಥ್ಯ, ಬೆಲೆ ಏರಿಕೆ, ಆರ್ಥಿಕ ವೃದ್ಧಿ, ನಿರ್ಮಾಣ ಚಟುವಟಿಕೆ ಮತ್ತು ಲಾಭದ ಪ್ರಮಾಣ ಆಧರಿಸಿ ನಿರ್ಧಾರಕ್ಕೆ ಬಂದಿದೆ.

ಕಾಲ ಕಾಲಕ್ಕೆ ತಯಾರಿಕೆ ತಗ್ಗಿಸಿ, ಬೆಲೆ ಹೆಚ್ಚಿಸುವಲ್ಲಿ ಪರಸ್ಪರ ಸಹಕರಿಸುವ  ಸಿಮೆಂಟ್ ತಯಾರಿಕಾ ಸಂಸ್ಥೆಗಳ ಹುನ್ನಾರ ಎಲ್ಲರಿಗೂ ಅರ್ಥವಾಗುವಂತಹದ್ದೆ. ಬೆಲೆ ಮತ್ತಿತರ ವಹಿವಾಟಿನ ಸ್ವರೂಪವನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಳ್ಳಲು ಸರಕುಗಳ ತಯಾರಕರು, ಉದ್ಯಮಿಗಳು ಇಂತಹ ಸಂಘಟನೆಗಳನ್ನು ರಚಿಸಿಕೊಳ್ಳುತ್ತಾರೆ.

ಒಂದೇ ಉದ್ದಿಮೆಯ ಒಂದಕ್ಕಿಂತ ಹೆಚ್ಚು ತಯಾರಿಕಾ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು ಉತ್ಪಾದನೆ ಪ್ರಮಾಣ, ಬೆಲೆ ಮಟ್ಟ ನಿರ್ಧರಿಸಲು ಮಾಡಿಕೊಳ್ಳುವ / ರಚಿಸಿಕೊಳ್ಳುವ ಸಂಘಟನೆ ಅಥವಾ ಒಪ್ಪಂದವೇ `ಆರ್ಥಿಕ ನಿಯಂತ್ರಣ ಕೂಟ~ ಆಗಿರುತ್ತದೆ. ತಮ್ಮಳಗಿನ ಸ್ಪರ್ಧೆಗೆ ಕಡಿವಾಣ ಹಾಕಿ, ಗರಿಷ್ಠ ಲಾಭ ಮಾಡಿಕೊಳ್ಳುವ ಉದ್ದೇಶವೂ ಇಂತಹ `ಕೂಟ~ಗಳಿಗೆ ಇರುತ್ತದೆ.

ನಿಯಂತ್ರಣ ಕೂಟಗಳು
ಗ್ರಾಹಕರ ಹಿತದೃಷ್ಟಿಯಿಂದ ನೋಡಿದರೆ ಎಲ್ಲ ಬಗೆಯ `ನಿಯಂತ್ರಣ ಕೂಟ~ಗಳು ಅಪಾಯಕಾರಿಯೇ.
ವಿಮಾನ ಯಾನ ಟಿಕೆಟ್, ರಿಯಲ್ ಎಸ್ಟೇಟ್, ಟೈರ್, ಔಷಧ, ಹಾಲು, ಸಿಮೆಂಟ್, ಸಕ್ಕರೆ ಹೀಗೆ - ಇಂತಹ `ನಿಯಂತ್ರಣ ಕೂಟ~ಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅರ್ಥ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಗ್ರಾಹಕರ ಶೋಷಣೆ
ಪರಿಣಾಮಕಾರಿ ಕಾವಲು ಪಡೆ ಇರದಿದ್ದಾಗ ಇಂತಹ `ನಿಯಂತ್ರಣ ಕೂಟ~ಗಳು ಹೆಚ್ಚು ಸಕ್ರಿಯವಾಗಿ ಲಾಭ ಬಾಚಿಕೊಳ್ಳುತ್ತವೆ. ಗ್ರಾಹಕರನ್ನು ಶೋಷಿಸುತ್ತವೆ. ಇಂತಹ ಒಕ್ಕೂಟ ಅಸ್ತಿತ್ವದಲ್ಲಿ ಇರುವೆಡೆ ಗ್ರಾಹಕರಿಗೆ ಆಯ್ಕೆ ಅವಕಾಶವೇ ಇರುವುದಿಲ್ಲ. ಗ್ರಾಹಕರು ಅನಿವಾರ್ಯವಾಗಿ ಹೆಚ್ಚಿನ ಬೆಲೆ ಪಾವತಿಸಬೇಕಾಗುತ್ತದೆ. ಕಳಪೆ ಸರಕುಗಳನ್ನೇ ಖರೀದಿಸುವ ಅನಿವಾರ್ಯತೆಯೂ ಉದ್ಭವಿಸಿರುತ್ತದೆ.

 ಏಕರೂಪದ ಉತ್ಪನ್ನಗಳ ವಹಿವಾಟಿನಲ್ಲಿಯೇ ಇಂತಹ `ನಿಯಂತ್ರಣ ಕೂಟ~ಗಳು ಅಸ್ತಿತ್ವಕ್ಕೆ ಬರುತ್ತವೆ. ಬೆಲೆಗಳನ್ನು ಹೆಚ್ಚಿಸಿದರೂ, ಅದರಿಂದ ಮಾರಾಟದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗದಂತೆಯೂ ಕೂಟಗಳು ಎಚ್ಚರಿಕೆ ವಹಿಸಿರುತ್ತವೆ.

ಸಿಮೆಂಟ್ ಖರೀದಿ  - ಮಾರಾಟ    ವಿಷಯದಲ್ಲಿ ಪರ್ಯಾಯ ಇರುವುದೇ ಇಲ್ಲ.  ಗ್ರಾಹಕರು ಸಿಮೆಂಟ್ ತಯಾರಿಕಾ ಕಂಪನಿಗಳು ನಿಗದಿಪಡಿಸುವ ಬೆಲೆಗೆ ಖರೀದಿಸುವ ಅನಿವಾರ್ಯತೆ ಇರುತ್ತದೆ.

`ನಿಯಂತ್ರಣ ಕೂಟ~ ಮಾದರಿ
ಬೆಲೆ ಕೂಟ: ಬೆಲೆ ಹೆಚ್ಚಳ ಅಥವಾ ಇಳಿಕೆ ಮಾಡುವ ಬೆಲೆ ನಿಗದಿ ಕೂಟ.ಮಾರುಕಟ್ಟೆ ಪಾಲುದಾರಿಕೆ: ತಮ್ಮಲ್ಲಿಯೇ ಗ್ರಾಹಕರು ಮತ್ತು ನಿರ್ದಿಷ್ಟ ಪ್ರದೇಶ ಹಂಚಿಕೊಳ್ಳುವುದು. ಮಾರುಕಟ್ಟೆಯಲ್ಲಿ `ಕೃತಕ ಅಭಾವ~ ಸೃಷ್ಟಿಸಲು ಉತ್ಪಾದನೆಗೆ ಕಡಿವಾಣ ಹಾಕುವುದು.  ಪೂರ್ವ ನಿರ್ಧರಿತ ಸಂಸ್ಥೆಗೆ ಹರಾಜು ಸಿಗುವಂತಾಗಲು ಹರಾಜು ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕವಾಗಿ  ಕಡಿಮೆ ಬೆಲೆ ನಮೂದಿಸುವುದು.

ದೂರು
ಕಟ್ಟಡ ನಿರ್ಮಾಣ ಗುತ್ತಿಗೆದಾರರ ಪ್ರಾತಿನಿಧಿಕ ಸಂಸ್ಥೆಯಾಗಿರುವ `ಭಾರತೀಯ ಕಟ್ಟಡ ನಿರ್ಮಾಣಗಾರರ ಸಂಸ್ಥೆ~ಯು, ಸಿಮೆಂಟ್ ತಯಾರಿಕಾ ಸಂಸ್ಥೆಗಳು ಬೆಲೆ ನಿಯಂತ್ರಿಸಲು ಏಕಸ್ವಾಮ್ಯ ಮತ್ತು ನಿರ್ಬಂಧಿತ ವ್ಯಾಪಾರ ವಹಿವಾಟು ನಡೆಸುತ್ತಿವೆ ಎಂದು ದೂರು ನೀಡಿತ್ತು.

ಪ್ರತಿ ಸಿಮೆಂಟ್ ಚೀಲದ ಬೆಲೆ 2004-05ರಲ್ಲಿ ರೂ  150 ಇದ್ದರೆ, 2012ರ ಮಾರ್ಚ್‌ನಲ್ಲಿ ರೂ 300ಕ್ಕೆ ಏರಿಕೆಯಾಗಿತ್ತು. ಸಿಮೆಂಟ್ ಕಾರ್ಖಾನೆಗಳ ಉತ್ಪಾದನಾ ಸಾಮರ್ಥ್ಯವು ಶೇ 90ರಿಂದ ಶೇ 73ಕ್ಕೆ ಕುಸಿದಿತ್ತು.
ಸ್ಪರ್ಧೆ ನಿಯಂತ್ರಣ ಸಂಸ್ಥೆ ಬಲಪಡಿಸಿ, ಉದ್ಯಮಿಗಳ ಹುನ್ನಾರಕ್ಕೆ ಕಡಿವಾಣ ಹಾಕುವ ಕಠಿಣ ಪ್ರಯತ್ನಗಳು ಇನ್ನಷ್ಟು ಚುರುಕುಗೊಂಡರೆ `ನಿಯಂತ್ರಣ ಕೂಟ~ಗಳ ಉಪಟಳ ಕಡಿಮೆಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.