ADVERTISEMENT

ಚಳವಳಿ ನಿಲ್ಲಿಸಿ ಎಂದರೆ ದ್ರೋಹಿ ಪಟ್ಟ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:30 IST
Last Updated 17 ಸೆಪ್ಟೆಂಬರ್ 2011, 19:30 IST

ತಿರುವನಂತಪುರ (ಪಿಟಿಐ): ಗಾಂಧಿವಾದಿ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಉಪವಾಸ ಸತ್ಯಾಗ್ರಹ ಚಳವಳಿಯ ಕೊನೆಯ ಹಂತದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ತಮ್ಮನ್ನು `ದ್ರೋಹಿ~ಯಂತೆ ಪಟ್ಟ ಕಟ್ಟಿ ಬಿಂಬಿಸಲು ಹೊರಟ ಕೆಲವರ ನಿಲುವಿಗೆ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ವಿಷಾದಿಸಿದ್ದಾರೆ.

ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಚಳವಳಿ ಹಾದಿ ತಪ್ಪಿದ್ದರ ವಿರುದ್ಧ ಧ್ವನಿ ಎತ್ತಿದ ತಮ್ಮನ್ನು ದುರಾತ್ಮನಂತೆ ಬಿಂಬಿಸಿರುವುದು ಇದೇ ಮೊದಲ ಸಲವಲ್ಲ, ಇದರಿಂದ ತಾವು ಇತರರಿಗೆ ದುಷ್ಟನಂತೆ ಕಂಡಿರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು.

ಆದರೆ ಸರಿಯಾದುದನ್ನು ಹೇಳುವ ಮತ್ತು ಅಗತ್ಯ ಬಿದ್ದರೆ ಭಿನ್ನಮತ ವ್ಯಕ್ತಪಡಿಸುವ ನಿಲುವಿನೊಂದಿಗೆ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಕೈಗೊಂಡಿರುವ ಚಳವಳಿಗೆ ಬೆಂಬಲ ನೀಡುವುದನ್ನು ಮುಂದುವರಿಸುವುದಾಗಿ ತಿಳಿಸಿದ ಅವರು, `1970ರ ಜಯಪ್ರಕಾಶ್ ನಾರಾಯಣ್ ನೇತೃತ್ವದ ಚಳವಳಿಯ ನಂತರ ಯುವಕರು ಮತ್ತು ಇತರ ವರ್ಗಗಳ ಜನರನ್ನು ಅಣ್ಣಾ ಚಳವಳಿ ಸೆಳೆದಿದೆ~ ಎಂದರು.

ಸಂಸತ್ ಲೋಕಪಾಲ ಮಸೂದೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದಾಗ, ಉಪವಾಸ ಕೈಬಿಡಲು ಪ್ರಧಾನಿ ಮತ್ತು ಇತರ ನಾಯಕರು ಮನವಿ ಮಾಡಿದಾಗ, ಉಪವಾಸ ನಿಲ್ಲಿಸಲು ಅಣ್ಣಾಗೆ ತಾವು ಸಲಹೆ ನೀಡಿರುವುದನ್ನು ಅವರು ಸಮರ್ಥಿಸಿಕೊಂಡರು. ದಲಿತರು ಮತ್ತು ಅಲ್ಪಸಂಖ್ಯಾತರನ್ನು ಸೆಳೆಯಲು ಅಣ್ಣಾ ಚಳವಳಿ ವಿಫಲವಾಗಿರುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.