ADVERTISEMENT

ಚಳಿಗೆ ನಡುಗಿದ ಉತ್ತರ ಭಾರತ

ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌ನಲ್ಲಿ ಶೀತಗಾಳಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2015, 19:59 IST
Last Updated 14 ಡಿಸೆಂಬರ್ 2015, 19:59 IST

ನವದೆಹಲಿ (ಪಿಟಿಐ): ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಶೀತಗಾಳಿ ಮುಂದುವರಿದಿದ್ದು, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಪಂಜಾಬ್‌ನಲ್ಲಿ ತಾಪಮಾನ ತೀವ್ರ ಕುಸಿದಿದೆ.

ಜಮ್ಮು ಮತ್ತು ಕಾಶ್ಮೀರದ ಲಡಾಖ್‌ನ ಲೆಹ್‌ ಹಾಗೂ ಕಾರ್ಗಿಲ್‌ ಚಳಿಯಲ್ಲಿ ನಡುಗಿದೆ. ಭಾನುವಾರ ರಾತ್ರಿ ಲೆಹ್‌ನಲ್ಲಿ ಮೈನಸ್‌ 12.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶನಿವಾರ ರಾತ್ರಿ ಇಲ್ಲಿಯ ಕನಿಷ್ಠ ಉಷ್ಣಾಂಶ ಮೈನಸ್‌ 12 ಡಿಗ್ರಿಯಷ್ಟಿತ್ತು. ಕಾರ್ಗಿಲ್‌ನಲ್ಲಿ ಮೈನಸ್‌ 12.1 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ
ದಾಖಲಾಗಿದೆ.

ದಕ್ಷಿಣ ಕಾಶ್ಮೀರದಲ್ಲೂ ಶೀತಗಾಳಿಯ ತೀವ್ರತೆ ಹೆಚ್ಚಿದ್ದು, ಕಾಜಿಗಂಡ್‌ನಲ್ಲಿ ಮೈನಸ್‌ 0.8 ಡಿಗ್ರಿ ಮತ್ತು ಕೊಕರ್‌ನಾಗ್‌ನಲ್ಲಿ 2.0 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಪ್ರಮುಖ ಪ್ರವಾಸಿ ತಾಣ ಎನಿಸಿರುವ ಗುಲ್‌ಮಾರ್ಗ್‌ನಲ್ಲಿ ತಾಪಮಾನ ಅಲ್ಪ ಹೆಚ್ಚಿದ್ದು, ಮೈನಸ್‌ ಒಂದು ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಶನಿವಾರ ಇಲ್ಲಿನ ಉಷ್ಣಾಂಶ ಮೈನಸ್‌ 9.2 ಡಿಗ್ರಿಯಾಗಿತ್ತು.

ಹಿಮಾಚಲ ಪ್ರದೇಶದ ಹಲವೆಡೆ ಹಿಮಪಾತ (ಶಿಮ್ಲಾ ವರದಿ): ಹಿಮಾಲಯದ ತಪ್ಪಲಲ್ಲಿರುವ ಹಿಮಾಚಲ ಪ್ರದೇಶ ಕೂಡಾ ಚಳಿಯಲ್ಲಿ ನಡುಗಿದೆ. ಇಲ್ಲಿನ ಪರ್ವತ ಪ್ರದೇಶಗಳಲ್ಲಿ ಹಿಮಪಾತವಾಗಿದೆ. ಮನಾಲಿಯಲ್ಲಿ ಮೈನಸ್‌ 3 ಡಿಗ್ರಿ, ಡಲ್‌ಹೌಸಿಯಲ್ಲಿ 3.0, ಶಿಮ್ಲಾದಲ್ಲಿ 3.4 ಮತ್ತು ಧರ್ಮಶಾಲಾದಲ್ಲಿ 6.6 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ಇತ್ತು.

ರಾಜ್ಯದ ಕೆಲವು ನದಿ ಮತ್ತು ಸರೋವರಗಳ ನೀರು ಅಲ್ಲಲ್ಲಿ ಹೆಪ್ಪುಗಟ್ಟಿದೆ. ಇದರಿಂದ ಜಲ ವಿದ್ಯುತ್‌ ಸ್ಥಾವರಗಳಿಗೆ ನೀರು ಸರಿಯಾಗಿ ಹರಿಯದೆ ವಿದ್ಯುತ್‌ ಉತ್ಪಾದನೆಯ ಪ್ರಮಾಣ ಶೇ 25 ರಿಂದ 40 ರಷ್ಟು ಕುಸಿತ ಕಂಡಿದೆ.

ಚಂಡೀಗಡ ವರದಿ: ಪಂಜಾಬ್‌ ಮತ್ತು ಹರಿಯಾಣ ಕೂಡಾ ಚಳಿಯಿಂದ ನಡುಗಿವೆ. ಹರಿಯಾಣದ ನರ್ನೌಲ್‌ನಲ್ಲಿ ಕನಿಷ್ಠ ಉಷ್ಣಾಂಶ ಮೈನಸ್‌ 2 ಡಿಗ್ರಿ ಸೆಲ್ಸಿಯಸ್‌ ಇತ್ತು. ಪಂಜಾಬ್‌ನ ಅಮೃತಸರ, ಲುಧಿಯಾನ ಮತ್ತು ಪಟಿಯಾಲದಲ್ಲಿ ಕ್ರಮವಾಗಿ 3.2, 4.6 ಮತ್ತು 7.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು.

ರಾಜಸ್ತಾನದಲ್ಲಿ ಶೀತಗಾಳಿ (ಜೈಪುರ ವರದಿ): ರಾಜಸ್ತಾನದ ಕೆಲವು ಭಾಗಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ತಾಪಮಾನದಲ್ಲಿ ಭಾರಿ ಇಳಿಕೆಯಾಗಿದೆ. ಚುರುವಿನಲ್ಲಿ ಮೈನಸ್‌ 4 ಡಿಗ್ರಿ ಮತ್ತು ಮೌಂಟ್‌ ಅಬು ಪ್ರದೇಶದಲ್ಲಿ ಮೈನಸ್‌ ಒಂದು ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ದಟ್ಟ ಮಂಜು ಆವರಿಸಿರುವ ಕಾರಣ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.