ADVERTISEMENT

ಚಾಲಕನಿಗೆ ಚಾಲಕನಾದ ಜಿಲ್ಲಾಧಿಕಾರಿ

ನಿವೃತ್ತ ಚಾಲಕನಿಗೆ ವಿಶೇಷ ಬೀಳ್ಕೊಡುಗೆ ನೀಡಿದ ಕರೂರು ಡಿ.ಸಿ

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:48 IST
Last Updated 3 ಮೇ 2018, 19:48 IST
ಪರಮಶಿವಂ ಅವರನ್ನು ಕಾರಿನಲ್ಲಿ ಕೂರುವಂತೆ ಜಿಲ್ಲಾಧಿಕಾರಿ ಟಿ. ಅನ್ಬಳಗನ್‌ (ಎಡ ಬದಿಯಲ್ಲಿರುವವರು) ಕರೆದ ಕ್ಷಣ
ಪರಮಶಿವಂ ಅವರನ್ನು ಕಾರಿನಲ್ಲಿ ಕೂರುವಂತೆ ಜಿಲ್ಲಾಧಿಕಾರಿ ಟಿ. ಅನ್ಬಳಗನ್‌ (ಎಡ ಬದಿಯಲ್ಲಿರುವವರು) ಕರೆದ ಕ್ಷಣ   

ಚೆನ್ನೈ: ಹಲವು ಜಿಲ್ಲಾಧಿಕಾರಿಗಳನ್ನು ಕಚೇರಿಯಿಂದ ಮನೆಗೆ ಬಿಡುತ್ತಿದ್ದ ಕಾರು ಚಾಲಕನ ನಿವೃತ್ತಿಯ ದಿನ ಜಿಲ್ಲಾಧಿಕಾರಿಯೇ ಸ್ವತಃ ಕಾರು ಚಾಲನೆ ಮಾಡಿ ಚಾಲಕ ಮತ್ತವರ ಪತ್ನಿಯನ್ನು ಮನೆಗೆ ಬಿಡುವ ಮೂಲಕ ವಿಶೇಷವಾಗಿ ಬೀಳ್ಕೊಡುಗೆ ನೀಡಿದ್ದಾರೆ.

ಕರೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಾಲಕರಾಗಿದ್ದ ಕೆ.ಪರಮಶಿವಂ, ತಮ್ಮ 35 ವರ್ಷಗಳ ಸೇವಾವಧಿಯಲ್ಲಿ ಹಲವು ಜಿಲ್ಲಾಧಿಕಾರಿಗಳನ್ನು ಕಚೇರಿಯಿಂದ ಮನೆಗೆ ಬಿಡುವ ಕೆಲಸ ಮಾಡಿದ್ದಾರೆ. ಸೋಮವಾರ ಅವರ ಕರ್ತವ್ಯದ ಕೊನೆಯ ದಿನ. ಕಚೇರಿಯಲ್ಲಿ ಸಹೋದ್ಯೋಗಿಗಳು ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭಕ್ಕೆ ಪತ್ನಿಯೊಂದಿಗೆ ಬಂದಿದ್ದರು.

ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುವ ಸಂದರ್ಭದಲ್ಲಿ ಏನಾದರು ನೆನಪಿನ ಕಾಣಿಕೆ ನೀಡಬೇಕೆಂದು ಜಿಲ್ಲಾಧಿಕಾರಿ ಟಿ. ಅನ್ಬಳಗನ್ ಆಲೋಚಿಸಿದರು. ಕೂಡಲೇ ಕಾರಿನ ಹಿಂದಿನ ಸೀಟಿನ ಡೋರ್‌ ತೆಗೆದು ದಂಪತಿಯನ್ನು ಕುಳಿತುಕೊಳ್ಳಲು ತಿಳಿಸಿದರು.

ADVERTISEMENT

ಸಿಬ್ಬಂದಿ ಆಶ್ಚರ್ಯದಿಂದ ನೋಡುತ್ತಿದ್ದರೆ, ಜಿಲ್ಲಾಧಿಕಾರಿ ಕೂರುವ ಸೀಟಿನಲ್ಲಿ ಕೂರಲು ಪರಮಶಿವಂ ಹಿಂದೇಟು ಹಾಕಿದರು.

ಆದರೂ, ಬಿಡದ ಜಿಲ್ಲಾಧಿಕಾರಿ ಕಾರಿನಲ್ಲಿ ಕೂರಿಸಿಕೊಂಡು ತಾವೇ ಚಾಲನೆ ಮಾಡಿಕೊಂಡು ಹೊರಟರು.

ಕಚೇರಿಯಿಂದ ಐದು ಕಿಲೋ ಮೀಟರ್ ದೂರದಲ್ಲಿದ್ದ ಅವರ ಮನೆಗೆ 10 ನಿಮಿಷದಲ್ಲಿ ಕರೆದೊಯ್ದರು. ಮನೆಯಲ್ಲಿ ಕುಟುಂಬ ಸದಸ್ಯರು ಏರ್ಪಡಿಸಿದ್ದ ಕೇಕ್ ಕತ್ತರಿಸುವ ಸಮಾರಂಭದಲ್ಲಿ ಭಾಗವಹಿಸಿ ಕೆಲ ಹೊತ್ತು ಕಾಲ ಕಳೆದರು.

‘ಜಿಲ್ಲಾಧಿಕಾರಿ ಕೂರುವ ಕಾರಿನ ಸೀಟಿನಲ್ಲಿ ನನಗೆ ಕುಳಿತುಕೊಳ್ಳಲು ಹೇಳಿದಾಗ ಆಶ್ಚರ್ಯವಾಯಿತು. ಅವರೊಬ್ಬ ಒಳ್ಳೆಯ ಮನುಷ್ಯ, ಅವರೊಂದಿಗೆ ಕೆಲಸ ಮಾಡಿದ ದಿನಗಳು ಮತ್ತು ನನಗೆ ವಿಶೇಷವಾಗಿ ನೀಡಿದ ಬೀಳ್ಕೊಡುಗೆಯ ಈ ಕ್ಷಣವನ್ನು ಎಂದೂ ಮರೆಯಲು ಸಾಧ್ಯವಿಲ್ಲ’ ಎಂದು ನಿವೃತ್ತ ಚಾಲಕ ಪರಮಶಿವಂ ಅವರು ಸಂತಸ ಹಂಚಿಕೊಂಡರು.

**

ಹಲವು ವರ್ಷಗಳಿಂದ ಚಾಲನೆ ಮಾಡಿದ ಕಾರಿನಲ್ಲೇ ಅವರನ್ನು ಮನೆಗೆ ಬಿಟ್ಟು ಬರಬೇಕು ಎನಿಸಿತು. ಇದು ಇಷ್ಟು ವರ್ಷದ ಅವರ ಸೇವೆಗೆ ನಾವು ನೀಡಿದ ಗೌರವ.

– ಟಿ. ಅನ್ಬಳಗನ್‌, ಕರೂರು ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.