ಚೆನ್ನೈ (ಪಿಟಿಐ): ಖ್ಯಾತ ಚಲನಚಿತ್ರ ನಿರ್ದೇಶಕ ಬಾಲುಮಹೇಂದ್ರ (75) ಅವರು ಗುರುವಾರ ಹೃದಯಾಘಾತದಿಂದ ನಿಧನರಾದರು.ಅವರಿಗೆ ಪತ್ನಿ ಮತ್ತು ಪುತ್ರ ಇದ್ದಾರೆ. ಹೃದಯಾಘಾತಕ್ಕೊಳಗಾದ ಬಾಲು ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
1939ರ ಮೇ 20ರಂದು ಶ್ರೀಲಂಕಾದಲ್ಲಿ ಜನಿಸಿದ ಬಾಲು ಮಹೇಂದ್ರ ಅವರು, ಚಲನಚಿತ್ರ ಛಾಯಾಗ್ರಾಹಕ (ಸಿನೆಮಾಟೊಗ್ರಾಫರ್) ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ಚಲನಚಿತ್ರ ನಿರ್ದೇಶಕರಾಗಿ ಮುಂಚೂಣಿಗೆ ಬಂದ ಅವರು, ಪ್ರಶಸ್ತಿ ಪುರಸ್ಕೃತ ಚಿತ್ರಗಳಾದ ‘ಮೂನ್‌ಡ್ರಾಂ ಪಿರೈ’ (ಇದೇ ಚಿತ್ರ ಹಿಂದಿಯಲ್ಲಿ ‘ಸದ್ಮಾ’ ಹೆಸರಿನಲ್ಲಿ ಹೆಸರು ಗಳಿಸಿದೆ) ಹಾಗೂ ‘ವೀಡು’ ಚಿತ್ರಗಳನ್ನು ನಿರ್ದೇಶಿಸಿದ್ದರು.
1974ರಲ್ಲಿ ‘ನೆಲ್ಲು’ ಎಂಬ ಮಲಯಾಳಂ ಚಿತ್ರದ ಮೂಲಕ ಚಲನ ಚಿತ್ರ ನಿರ್ದೇಶಕರಾದರು. ಇದೇ ಚಿತ್ರಕ್ಕೆ ಕೇರಳ ಸರ್ಕಾರದಿಂದ ‘ಉತ್ತಮ ಚಲನಚಿತ್ರ ಛಾಯಾಗ್ರಾಹಕ’ ಪ್ರಶಸ್ತಿಗೆ ಭಾಜನರಾಗಿದ್ದರು.ಪ್ರಥಮ ಬಾರಿಗೆ 1977ರಲ್ಲಿ ಕನ್ನಡದಲ್ಲಿ ‘ಕೋಕಿಲ’ ಚಿತ್ರ ನಿರ್ದೇಶನ ಮಾಡಿದರು.ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿಯಲ್ಲಿ 20ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
‘ಕೋಕಿಲ’ ಚಿತ್ರದ ಮೂಲಕ ನಾಯಕನಾಗಿ ಪರಿಚಿತರಾದ ಮೋಹನ್ ಅವರು, ಮುಂದೆ ‘ಕೋಕಿಲ ಮೋಹನ್’ ಎಂದೇ ಪ್ರಸಿದ್ಧಿಯಾದರು.ಬಾಲು ನಿರ್ದೇಶನದ ‘ವೀಡು’ (1988) ಹಾಗೂ ‘ವನ್ನ ವನ್ನ ಪೂಕ್ಕಲ್’ (1992) ಚಿತ್ರಗಳು ರಾಷ್ಟ್ರಪ್ರಶಸ್ತಿಗೆ ಭಾಜನವಾಗಿವೆ. ‘ಸಂಧ್ಯಾ ರಾಗಂ’ (1990) ಚಿತ್ರ ಉತ್ತಮ ಕೌಟುಂಬಿಕ ಸಂದೇಶ ಪ್ರಶಸ್ತಿಗೆ ಪಾತ್ರವಾಗಿದೆ.
ಬಾಲು ಅವರು ಇತ್ತೀಚೆಗಷ್ಟೇ ‘ಥಲೈ ಮುರೈಗಲ್’ ಎಂಬ ತಮಿಳು ಚಿತ್ರ ನಿರ್ದೇಶಿಸಿದ್ದರು. ಅಜ್ಜ–ಮೊಮ್ಮಗನ ಸಂಬಂಧದ ಕಥೆಯುಳ್ಳ ಈ ಚಿತ್ರದಲ್ಲಿ ಬಾಲು ಅವರು ಪ್ರಮುಖ ಪಾತ್ರವನ್ನೂ ವಹಿಸಿದ್ದರು.ಸಿನಿಮಾ ಛಾಯಾಗ್ರಹಣದಲ್ಲಿ ಅವರಿಗಿದ್ದ ಪ್ರತಿಭೆ ಮತ್ತು ಕೌಶಲದಿಂದಾಗಿ ಹೆಸರುವಾಸಿಯಾಗಿದ್ದ ಬಾಲು ಅವರು, ಅನೇಕ ಪ್ರತಿಭಾವಂತರಿಗೆ ಗುರುವಾಗಿದ್ದರು."
ದಕ್ಷಿಣ ಭಾರತೀಯ ಸಿನಿಮಾ ರಂಗದಲ್ಲಿ ಮೊದಲ ಬಾರಿಗೆ ನವೀನ ಶೈಲಿಯ ಕ್ಯಾಮೆರಾ ಬಳಸಿ, ನೈಸರ್ಗಿಕ ಬೆಳಕಿನಲ್ಲಿ ಚಿತ್ರ ನಿರ್ಮಿಸಿದ್ದ ಕೀರ್ತಿ ಅವರದಾಗಿತ್ತು.
ಸಂತಾಪ: ಬಾಲು ಅವರ ನಿಧನಕ್ಕೆ ಭಾರತೀಯ ಚಿತ್ರರಂಗದ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಚಿತ್ರನಟ ಸಿದ್ಧಾರ್ಥ್, ನಟಿ ಅಮಲಾ ಪೌಲ್, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಲಕ್ಷ್ಮೀ ರಾಮಕೃಷ್ಣ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಹಾಗೂ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.