ADVERTISEMENT

ಚಿನ್ನ, ಬೆಳ್ಳಿಗೆ ಶೇ3 ತೆರಿಗೆ

ಪಿಟಿಐ
Published 4 ಜೂನ್ 2017, 9:27 IST
Last Updated 4 ಜೂನ್ 2017, 9:27 IST
ಚಿನ್ನ, ಬೆಳ್ಳಿಗೆ ಶೇ3 ತೆರಿಗೆ
ಚಿನ್ನ, ಬೆಳ್ಳಿಗೆ ಶೇ3 ತೆರಿಗೆ   

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಚಿನ್ನ ಮತ್ತು ಬೆಳ್ಳಿಗೆ ಶೇ 3, ಬಿಸ್ಕತ್‌ಗೆ ಶೇ 18 ಮತ್ತು ₹ 500ಕ್ಕಿಂತ ಕಡಿಮೆ ದರದ ಪಾದರಕ್ಷೆಗೆ ಶೇ 5 ರಷ್ಟು ತೆರಿಗೆ ದರಗಳನ್ನು ನಿಗದಿ ಮಾಡಿದೆ.

ನವದೆಹಲಿಯಲ್ಲಿ ಶನಿವಾರ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ನಡೆದ ಮಂಡಳಿಯ 15ನೇ ಸಭೆಯಲ್ಲಿ ಪ್ರಮುಖ ಸರಕುಗಳಿಗೆ ತೆರಿಗೆ ದರಗಳನ್ನು ಅಂತಿಮಗೊಳಿಸಲಾಯಿತು.

ಇದನ್ನೂ ಓದಿ...
ಸಿನಿಮಾ, ಮೊಬೈಲ್‌ ದುಬಾರಿ

ಸದ್ಯ ಇರುವ ತೆರಿಗೆ ವ್ಯವಸ್ಥೆಯಲ್ಲಿ, ಚಿನ್ನಕ್ಕೆ ಶೇ 10 ರಷ್ಟು ಆಮದು ಸುಂಕ  ಇದೆ. ಇದರಿಂದ ಒಟ್ಟು ಶೇ 12ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ಜಿಎಸ್‌ಟಿಯಲ್ಲಿ ಚಿನ್ನಕ್ಕೆ ಶೇ 3 ರಷ್ಟು ತೆರಿಗೆ ನಿಗದಿಮಾಡಲಾಗಿದೆ. ಇದಕ್ಕೆ ಶೇ10 ರಷ್ಟು ಆಮದು ಸುಂಕ ಸೇರಿಸಿದರೆ ಒಟ್ಟು ತೆರಿಗೆ ಶೇ 13ಕ್ಕೆ ಅಂದರೆ
ಶೇ 1 ರಷ್ಟು ಹೆಚ್ಚಾಗಲಿದೆ.

ADVERTISEMENT

ಪಾದರಕ್ಷೆ, ಬಿಸ್ಕತ್‌ಗೆ ಗರಿಷ್ಠ ಶೇ 18: ಸದ್ಯ, ₹500 ರಿಂದ ₹1,000 ಬೆಲೆಯ ಪಾದರಕ್ಷೆಗಳಿಗೆ ಶೇ 6 ರಷ್ಟು ಅಬಕಾರಿ ಸುಂಕವಿದೆ. ಇದಲ್ಲದೆ ರಾಜ್ಯಗಳು ಪ್ರತ್ಯೇಕವಾಗಿ ‘ವ್ಯಾಟ್‌’ ವಿಧಿಸುತ್ತಿವೆ.

ಹೊಸ ತೆರಿಗೆ ವ್ಯವಸ್ಥೆಯಲ್ಲಿ ₹500ಕ್ಕಿಂತ ಕಡಿಮೆ ಬೆಲೆಯ ಪಾದರಕ್ಷೆಗಳಿಗೆ ತೆರಿಗೆ ಶೇ 1 ರಷ್ಟು ಕಡಿಮೆಯಾಗಲಿದೆ.

₹500 ರಿಂದ ₹1,000 ಬೆಲೆಯ ಪಾದರಕ್ಷೆಗಳಿಗೆ ಸದ್ಯ ಅಬಕಾರಿ ಸುಂಕ ಸೇರಿ ಶೇ 23 ರಷ್ಟು ತೆರಿಗೆ ಇದೆ. ಜಿಎಸ್‌ಟಿಯಲ್ಲಿ ₹500ಕ್ಕೂ ಹೆಚ್ಚಿನ ಬೆಲೆಯದ್ದಕ್ಕೆ ಶೇ 18 ರಷ್ಟು ತೆರಿಗೆ ನಿಗದಿ ಮಾಡಿರುವುದರಿಂದ ಪಾದರಕ್ಷೆಗಳು ಅಗ್ಗವಾಗಲಿವೆ.

ಪ್ರತಿ ಕೆ.ಜಿಗೆ ₹100ಕ್ಕಿಂತಲೂ ಕಡಿಮೆ ದರ ಇರುವ ಬಿಸ್ಕತ್‌ಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂದು ಕೆಲವು ರಾಜ್ಯಗಳು ಒತ್ತಾಯಿಸಿದ್ದವು. ಆದರೆ ಎಲ್ಲಾ ರೀತಿಯ ಬಿಸ್ಕತ್‌ಗಳಿಗೂ ಶೇ 18 ರಷ್ಟು ತೆರಿಗೆ ದರ ನಿಗದಿಮಾಡಲಾಗಿದೆ.

₹1,000ಕ್ಕಿಂತ ಕಡಿಮೆ ಬೆಲೆಯ ಹತ್ತಿ, ಹತ್ತಿ ನೂಲು, ನೇಯ್ದ ಬಟ್ಟೆ ಮತ್ತು ಸಿದ್ಧ ಉಡುಪುಗಳಿಗೆ  ಶೇ 5 ರಷ್ಟು ತೆರಿಗೆ ದರ, ₹1,000ಕ್ಕಿಂತ ಹೆಚ್ಚಿನ ಬೆಲೆಯ ಉಡುಪುಗಳಿಗೆ ಶೇ 12 ರಷ್ಟು, ಸಿಂಥೆಟಿಕ್‌ ಬಟ್ಟೆಗೆ ಶೇ 18 ರಷ್ಟು ತೆರಿಗೆ ನಿಗದಿಮಾಡಲಾಗಿದೆ. ಪ್ಯಾಕ್‌ ಮಾಡಿದ ಆಹಾರ ಪದಾರ್ಥಗಳಿಗೆ ಶೇ 5, ಸೌರ ಫಲಕಗಳಿಗೆ 5, ಕೃಷಿ ಯಂತ್ರಗಳಿಗೆ ಶೇ 5, ಮೆರುಗು ಕೊಡದ ವಜ್ರಕ್ಕೆ ಶೇ 0.25ರಷ್ಟು ತೆರಿಗೆ ಗೊತ್ತು ಮಾಡಿದೆ.

ರಾಜ್ಯಗಳ ಒಪ್ಪಿಗೆ: ‘ಹೊಸ ತೆರಿಗೆ ವ್ಯವಸ್ಥೆಗೆ ಬದಲಾಗಲು ಇರುವ ಅವಕಾಶಗಳು ಮತ್ತು ಐ.ಟಿ. ರಿಟರ್ನ್ಸ್‌ ಸಲ್ಲಿಕೆಯ ನಿಯಮಗಳು  ಅಂತಿಮಗೊಂಡಿವೆ. ಜುಲೈ1 ರಿಂದ ಜಿಎಸ್‌ಟಿ ಜಾರಿಗೊಳಿಸಲು ಎಲ್ಲಾ ರಾಜ್ಯಗಳೂ ಒಪ್ಪಿಗೆ ನೀಡಿವೆ’ ಎಂದು ಕೇರಳದ ಹಣಕಾಸು ಸಚಿವ ಥಾಮಸ್ ಐಸಾಕ್‌ ತಿಳಿಸಿದರು.
‘ಜಿಎಸ್‌ಟಿ ನೆಟ್‌ವರ್ಕ್‌ ಕಾರ್ಯವೈಖರಿಗೆ ಮಂಡಳಿ ಮೆಚ್ಚುಗೆ ಸೂಚಿಸಿದೆ ಜೂನ್‌ 11ರಂದು ಮುಂದಿನ ಸಭೆ ನಡೆಯಲಿದೆ’ ಎಂದು ಜೇಟ್ಲಿ ತಿಳಿಸಿದರು.

ಮೆಚ್ಚುಗೆ: ಜಿಎಸ್‌ಟಿ ಮಂಡಳಿಯು ಚಿನ್ನಾಭರಣ ಮತ್ತು ಜವಳಿ ಮೇಲೆ ವಿಧಿಸಿರುವ ತೆರಿಗೆ ದರಗಳ ಬಗ್ಗೆ ಉದ್ಯಮಗಳು ಮೆಚ್ಚುಗೆ ವ್ಯಕ್ತಪಡಿಸಿವೆ.
‘ಚಿನ್ನಾಭರಣ ಉದ್ಯಮವನ್ನು ಹೆಚ್ಚು ಸಂಘಟಿತ ವಲಯವಾಗಿ ಕೆಲಸ ಮಾಡುವಂತೆ ಉತ್ತೇಜಿಸುವ ನಿರ್ಧಾರವನ್ನು ಮಂಡಳಿ ತೆಗೆದುಕೊಂಡಿದೆ’ ಎಂದು ಹರಳು ಮತ್ತು ಆಭರಣ ಮಾರಾಟಗಾರರ ಒಕ್ಕೂಟ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.