ADVERTISEMENT

ಚಿರಂಜೀವಿ ಮಗಳ ಮನೆ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 14 ಮೇ 2012, 19:30 IST
Last Updated 14 ಮೇ 2012, 19:30 IST

ಹೈದರಾಬಾದ್: ನಟ- ರಾಜ್ಯಸಭಾ ಸದಸ್ಯ ಚಿರಂಜೀವಿ ಅವರ ಹಿರಿಯ ಮಗಳ ಮನೆಯ ಮೇಲೆ ಆದಾಯ ತೆರಿಗೆ (ಐ.ಟಿ) ಇಲಾಖೆ ದಾಳಿ ನಡೆಸಿ, ರೂ 35 ಕೋಟಿ ನಗದು ಮತ್ತು ರೂ 4.60 ಕೋಟಿ ಮೌಲ್ಯದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ.

ಚೆನ್ನೈ ಪೊಯೆಸ್ ಗಾರ್ಡ್‌ನ್‌ನಲ್ಲಿರುವ ಚಿರಂಜೀವಿ ಪುತ್ರಿ ಸುಷ್ಮಿತಾ ಮತ್ತು ಆಕೆಯ ಪತಿ ವಿಷ್ಣು ಪ್ರಸಾದ್ ಅವರ ಮನೆ ಮೇಲೆ ಐ.ಟಿ ಅಧಿಕಾರಿಗಳು ಶುಕ್ರವಾರವೇ ಶೋಧ ಕಾರ್ಯ ಆರಂಭಿಸಿದ್ದರು. ಇದು ಭಾನುವಾರದವರೆಗೂ ಮುಂದುವರಿದಿತ್ತು.

ನಗದು ಮತ್ತು ದಾಖಲೆ ಪತ್ರಗಳನ್ನು ಕರ್ಟನ್‌ಗಳಲ್ಲಿ ಬಚ್ಚಿಡಲಾಗಿತ್ತು. ಉಗ್ರಾಣ ಕೋಣೆಯಲ್ಲಿದ್ದ 35 ಕರ್ಟನ್‌ಗಳಲ್ಲಿ ಹಣದ ಕಂತೆಗಳಿದ್ದವು. ಪ್ರತಿಯೊಂದರಲ್ಲೂ ಸುಮಾರು ಒಂದು ಕೋಟಿಯಷ್ಟು ಹಣವಿತ್ತು. ವಶ ಪಡಿಸಿಕೊಂಡ ನಗದನ್ನು ಪರಿಶೀಲನೆಗಾಗಿ ರಾಷ್ಟ್ರೀಕೃತ ಬ್ಯಾಂಕ್‌ಗೆ ಕಳುಹಿಸಿ ದೃಢಪಡಿಸಿಕೊಳ್ಳಲಾಯಿತು ಎಂದು ಐ.ಟಿ ಪತ್ರಿಕಾ ಹೇಳಿಕೆ ತಿಳಿಸಿದೆ.

ವಿಷ್ಣು ಪ್ರಸಾದ್ ಅವರ ತಂದೆ ಶಿವ ಪ್ರಸಾದ್ ಅವರ ಮನೆ ಮತ್ತು ಕಚೇರಿಯಲ್ಲೂ ಶೋಧ ಕಾರ್ಯ ನಡೆಸಿದೆ.
ಈ ಮಧ್ಯೆ ಹೈದರಾಬಾದ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಚಿರಂಜೀವಿ, `ನನ್ನ ಅಳಿಯನ ಮನೆ ಮೇಲೆ ನಡೆದಿರುವ ಐ.ಟಿ ದಾಳಿಯು ಅಳಿಯನ ಚಿಕ್ಕಪ್ಪ ನಂದಗೋಪಾಲ್ ಮನೆಯಲ್ಲಿ ನಡೆದ ದಾಳಿಯ ಭಾಗವಷ್ಟೆ~ ಎಂದಿದ್ದಾರೆ.

`ನಂದಗೋಪಾಲ್ ದೊಡ್ಡ ಉದ್ಯಮಿ ಆಗಿರುವುದರಿಂದ ಇಂತಹ ಶೋಧ ಕಾರ್ಯ ನಡೆಸುವುದು ಸಾಮಾನ್ಯ. ಅಕ್ರಮ ಹಣ ವಹಿವಾಟು ಇಲ್ಲವೆ ಬೇನಾಮಿ ಮೂಲಗಳಿಂದ ಆದಾಯವಿದ್ದರೆ ಐ.ಟಿ ಅದನ್ನು ಶೀಘ್ರದಲ್ಲೇ ಬಹಿರಂಗ ಪಡಿಸುತ್ತದೆ ಎಂದು ನಂಬಿದ್ದೇನೆ. ಈ ದಾಳಿಗೂ ನನಗೂ ಏನು ಸಂಬಂಧ~ ಎಂದು ಚಿರಂಜೀವಿ ಪ್ರಶ್ನಿಸಿದ್ದಾರೆ.

`ದಾಳಿ ನಡೆದ ಸಮಯದಲ್ಲಿ ಸುಷ್ಮಿತಾ ಇಲ್ಲಿಯೇ ಇದ್ದಳು. ವಶ ಪಡಿಸಿಕೊಂಡಿರುವ ಹಣ ನನಗೆ ಸೇರಿದ್ದು ಎಂಬುದು ಬರೀ ವಂದತಿ. ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ಮೊಕದ್ದಮೆ ಹೂಡುವೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.