ADVERTISEMENT

ಚೀನಾ ಗಡಿಗೆ ಯೋಧರು

ಪಿಟಿಐ
Published 2 ಜುಲೈ 2017, 19:54 IST
Last Updated 2 ಜುಲೈ 2017, 19:54 IST
ಚೀನಾ ಗಡಿಗೆ ಯೋಧರು
ಚೀನಾ ಗಡಿಗೆ ಯೋಧರು   

ನವದೆಹಲಿ: ಚೀನಾದ ಸೈನಿಕರ ಜತೆ ಸಂಘರ್ಷ ನಡೆಯುತ್ತಿರುವ ಸಿಕ್ಕಿಂ ಗಡಿಗೆ ಭಾರತ ಇನ್ನಷ್ಟು ಯೋಧರನ್ನು ಕಳುಹಿಸಿದೆ.

ಚೀನಾದ ಸೇನೆ ಕೂಡ ಸಂಘರ್ಷ ಉಂಟಾಗಿರುವ ಪ್ರದೇಶದಲ್ಲಿ ಹೆಚ್ಚು ಯೋಧರನ್ನು ನಿಯೋಜಿಸಿದೆ. ಭಾರತವೇ ಅತಿಕ್ರಮಣ ಮಾಡಿದೆ ಎಂದು ಚೀನಾ ಆರೋಪಿಸುತ್ತಿದೆ.

ಕಳೆದ ಒಂದು ತಿಂಗಳಿನಿಂದ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದೆ. ಹಾಗಾಗಿ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿದೆ. ಆದರೆ ಸೈನಿಕರನ್ನು ಕಳುಹಿಸಿರುವುದಕ್ಕೆ ಯುದ್ಧ ಮಾಡುವ ಉದ್ದೇಶ ಇಲ್ಲ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಯುದ್ಧದ ಉದ್ದೇಶ ಇಲ್ಲದಿದ್ದರೆ ಸೈನಿಕರು ಬಂದೂಕಿನ ನಳಿಕೆಯನ್ನು ಕೆಳಮುಖವಾಗಿ ಇರಿಸಿ ಮುಂದೆ ಸಾಗುತ್ತಾರೆ. ಸಿಕ್ಕಿಂ ಗಡಿಯಲ್ಲಿದ್ದ ಭಾರತದ ಎರಡು ಬಂಕರ್‌ಗಳನ್ನು ಜೂನ್‌ 6ರಂದು ನಾಶ ಮಾಡಿರುವ ಚೀನಾ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದೆ. ಇದರಿಂದಾಗಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

ಆದರೆ ಚೀನೀಯರು ಮತ್ತಷ್ಟು ಹಾನಿ ಅಥವಾ ಅತಿಕ್ರಮಣ ಮಾಡದಂತೆ ಭಾರತದ ಯೋಧರು ತಡೆದಿದ್ದಾರೆ. ಅಲ್ಲಿಂದ 20 ಕಿ.ಮೀ. ದೂರವಿರುವ ಸೇನಾ ಶಿಬಿರದಿಂದ ಜೂನ್‌ 8ರಂದೇ ಮತ್ತಷ್ಟು ಯೋಧರನ್ನು ಅಲ್ಲಿಗೆ ಭಾರತ ಕಳುಹಿಸಿದೆ.  ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಎರಡೂ ಕಡೆಯ ಕೆಲವು ಸೈನಿಕರಿಗೆ ಸಣ್ಣ ಪುಟ್ಟ ಗಾಯಗಳೂ ಆಗಿವೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಎರಡೂ ದೇಶಗಳ ನಡುವೆ ಸಂಘರ್ಷ ಆರಂಭವಾದ ನಂತರ ಮೇಜರ್‌ ಜನರಲ್‌ ದರ್ಜೆಯ ಅಧಿಕಾರಿಯೊಬ್ಬ ರನ್ನು ಗಡಿ ಪ್ರದೇಶಕ್ಕೆ ಕಳುಹಿಸಿದ ಭಾರತದ ಸೇನೆ, ಶಾಂತಿ ಮಾತುಕತೆಗೆ ಕೋರಿಕೆ ಕಳುಹಿಸಿತ್ತು. ಎರಡು ಕೋರಿಕೆಗಳಿಗೆ ಪ್ರತಿಕ್ರಿಯೆ ನೀಡದ ಚೀನಾ ಮೂರನೇ ಕೋರಿಕೆ ನಂತರ ಮಾತುಕತೆಗೆ ಒಪ್ಪಿಗೆ ನೀಡಿತ್ತು.

ದೋಕ ಲಾ ಪ್ರದೇಶದಿಂದ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಶಾಂತಿ ಮಾತುಕತೆಯಲ್ಲಿ ಭಾರತವನ್ನು ಚೀನಾ ಒತ್ತಾಯಿಸಿತ್ತು.

(ಬೀಜಿಂಗ್‌ ವರದಿ): ಸದ್ಯದ ಬಿಕ್ಕಟ್ಟು ಬಗೆಹರಿಯಬೇಕಿದ್ದರೆ ವಿವಾದಾತ್ಮಕ ದೋಕ್‌ ಲಮ್‌ ಪ್ರದೇಶದಿಂದ ಭಾರತ ಸೇನೆಯನ್ನು ವಾಪಸ್‌ ಕರೆಸಿಕೊಳ್ಳಬೇಕು ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಕ್ಸಿನುವಾ ಹೇಳಿದೆ.

ಸಿಕ್ಕಿಂನಲ್ಲಿ ಭಾರತ–ಚೀನಾ ಗಡಿಯನ್ನು 1890ರ ಸಿನೊ–ಬ್ರಿಟಿಷ್‌ ಒಪ್ಪಂದದ ಪ್ರಕಾರ ಗುರುತಿಸಲಾಗಿದೆ ಎಂದು ಚೀನಾ ಹೇಳಿದೆ. ಆದರೆ ಸಿಕ್ಕಿಂ ವಲಯದ ಗಡಿಯನ್ನು 2012ರಲ್ಲಿ ನಿಗದಿಪಡಿಸಲಾಗಿದೆ ಎಂಬುದು ಭಾರತದ ವಾದವಾಗಿದೆ.

ದೊಡ್ಡ ಬಿಕ್ಕಟ್ಟು
1962ರ ಯುದ್ಧದ ನಂತರ ಭಾರತ ಮತ್ತು ಚೀನಾ ನಡುವಣ ಅತ್ಯಂತ ದೊಡ್ಡ ಬಿಕ್ಕಟ್ಟು ಇದು. 2013ರಲ್ಲಿ ಜಮ್ಮು ಮತ್ತು ಕಾಶ್ಮೀರದ ಲಡಾಕ್‌ನ ದೌಲತ್‌ ಬೇಗ್‌ ಓಲ್ಡೀಯಲ್ಲಿ ಚೀನಾದ ಸೇನೆ ಭಾರತದೊಳಕ್ಕೆ 30 ಕಿ.ಮೀನಷ್ಟು ಅತಿಕ್ರಮಣ ಮಾಡಿತ್ತು. ಇದು ತನ್ನ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದ ಭಾಗ ಎಂದು ಚೀನಾ ವಾದಿಸಿತ್ತು. ಆದರೆ ಭಾರತದ ಸೇನೆ ಚೀನಾ ಯೋಧರನ್ನು ಹೊರಗಟ್ಟುವಲ್ಲಿ ಯಶಸ್ವಿಯಾಗಿತ್ತು. ಈ ಸಂಘರ್ಷ 21 ದಿನ ನಡೆದಿತ್ತು. ಈ ಬಾರಿ ಜೂನ್‌ 1ರಂದು ಆರಂಭವಾದ ಸಂಘರ್ಷ ಇನ್ನೂ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT