ADVERTISEMENT

ಚುನಾವಣೆಯಲ್ಲಿ ಸ್ಪರ್ಧಿಸಬಹುದೇ?

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 19:30 IST
Last Updated 20 ಜೂನ್ 2011, 19:30 IST

ನವದೆಹಲಿ: ಉದ್ದೇಶಿತ 11ಮಂದಿ ಲೋಕಪಾಲರು ಅಧಿಕಾರ ಬಿಟ್ಟ ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸಬಹುದೇ?

ಇಂತಹದೊಂದು ಅಪರೂಪದ ಪ್ರಶ್ನೆ `ಲೋಕಪಾಲ ಕರಡು ಮಸೂದೆ ಸಮಿತಿ~ಯಲ್ಲಿ ಚರ್ಚೆ ಆಗಿದೆ. ಅಣ್ಣಾ ಹಜಾರೆ ತಂಡ ಸಭೆ ಬಹಿಷ್ಕರಿಸಿದ್ದ ದಿನ ಪ್ರಸ್ತಾಪವಾದ ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಪ್ರತಿನಿಧಿಗಳು ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.

ಲೋಕಪಾಲದ ಅಧ್ಯಕ್ಷರು ಹಾಗೂ ಸದಸ್ಯರು ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಮಾಡದೆ ಹಾಗೆ ಬಿಡಲು ಉದ್ದೇಶಿಸಲಾಯಿತು. ಈ ಬಗ್ಗೆ ಅಂತಿಮ ನಿರ್ಧಾರ ಮಾಡುವ ಅಧಿಕಾರವನ್ನು ಸಂಪುಟಕ್ಕೆ ಬಿಡಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಲೋಕಪಾಲ ಅಧ್ಯಕ್ಷರು ಮತ್ತು ಸದಸ್ಯರಾಗಿದ್ದವರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಹುದ್ದೆಗೆ ನೇಮಕ ಆಗಲು ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಹೊಂದಿರುವುದಿಲ್ಲ ಎಂದು ಉದ್ದೇಶಿತ ಲೋಕಪಾಲ ಮಸೂದೆ ಕರಡು ಅಧಿನಿಯಮ ಹೇಳುತ್ತದೆ. ಈ ವಿಷಯದ ಮೇಲೆ ತೀರ್ಮಾನ ಆಗಬೇಕು ಎಂಬುದು ಸಿಬಲ್ ಅಭಿಪ್ರಾಯ.

ಸಂವಿಧಾನದತ್ತವಾದ ಹಕ್ಕನ್ನು ಮೊಟಕುಗೊಳಿಸುವುದು ಹೇಗೆ ಎಂಬ ನಿಲುವು ಸಮಿತಿ ಅಧ್ಯಕ್ಷರಾದ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರದ್ದು. ಹಾಗೇನಾದರೂ ಮಾಡಿದರೆ ಅದು ಕಾನೂನು ಬಾಹಿರ ಎಂಬ ಅಭಿಪ್ರಾಯ ಅವರದ್ದು. ಸಂವಿಧಾನ ತಿದ್ದುಪಡಿ  ಮೂಲಕ ಇದನ್ನು ನಿಷೇಧಿಸಬಹುದು ಎಂಬುದು ಕಾನೂನು ಸಚಿವ ವೀರಪ್ಪ ಮೊಯಿಲಿ  ಪ್ರತಿಕ್ರಿಯೆ. ಇದಕ್ಕೆ ಸಲ್ಮಾನ್ ಖುರ್ಷಿದ್  ಅವರಿಂದ ವಿರೋಧ.

ಅಂತಿಮವಾಗಿ ವಿಷಯವನ್ನು ಸಂಪುಟದ ತೀರ್ಮಾನಕ್ಕೆ ಬಿಟ್ಟ ಸಚಿವರು. ಲೋಕಪಾಲ ಅಧ್ಯಕ್ಷರು ಮತ್ತು ಸದಸ್ಯರು ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಸಂಸತ್ತು, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸ್ಪರ್ಧಿಸಲು ಅರ್ಹತೆ ಹೊಂದಿರುವುದಿಲ್ಲ ಎಂಬ ಅಂಶವನ್ನು ಈ ಕರಡು ಮಸೂದೆಗೆ ಸೇರ್ಪಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.