ADVERTISEMENT

ಚುನಾವಣೆ: ಮೀಸಲು ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಕಣ್ಣು

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ನವದೆಹಲಿ (ಪಿಟಿಐ): ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಬಲವೃದ್ಧಿಸಿಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್ ವಿಶೇಷವಾಗಿ ಮೀಸಲು ಕ್ಷೇತ್ರಗಳತ್ತ ಗಮನ ಹರಿಸಿದ್ದು, ಈ ಕ್ಷೇತ್ರಗಳಲ್ಲಿ ದಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

 ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಪಕ್ಷದ ಮುಖಂಡರೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದು, ಪಕ್ಷ ಅನುಸರಿಸಬೇಕಾದ ನೀತಿಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಮುಖ್ಯವಾಗಿ ದಲಿತರಿಗೆ ಮೀಸಲಾಗಿರುವ ಕ್ಷೇತ್ರಗಳತ್ತ ಗಮನ ಹರಿಸುವಂತೆ ಮುಖಂಡರಿಗೆ ಸೂಚಿಸಿದ್ದಾರೆ.

ಇದೇ ಉದ್ದೇಶದಿಂದ ಮುಖ್ಯಮಂತ್ರಿ ಮಾಯಾವತಿ ಅವರಿಗೆ ಈ ಹಿಂದೆ ಆಪ್ತರಾಗಿದ್ದ ಹಾಗೂ ಪ್ರಸ್ತುತ ಬಾರಾಬಂಕಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಪಿ.ಎಲ್.ಪುನಿಯಾ ಹಾಗೂ ಹರಿಯಾಣದ ಸಿರ್ಸಾ ಲೋಕಸಭಾ ಕ್ಷೇತ್ರದ ಸದಸ್ಯ ಅಶೋಕ್ ತನ್ವರ್ ಅವರಿಗೆ 89 ಕ್ಷೇತ್ರಗಳ ಉಸ್ತುವಾರಿ ವಹಿಸಿದ್ದು, ಇದರಲ್ಲಿ 85 ಕ್ಷೇತ್ರಗಳು ದಲಿತರಿಗೆ ಮೀಸಲಾಗಿವೆ. ಇನ್ನುಳಿದ ನಾಲ್ಕು ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಆದರೆ ಈ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ದಲಿತ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿದೆ.

ಪರಿಶಿಷ್ಟ ಜಾತಿ ರಾಷ್ಟ್ರೀಯ ಆಯೋಗದ ಅಧ್ಯಕ್ಷರೂ ಆಗಿರುವ ಪುನಿಯಾ ಅವರು, ಬಿಎಸ್ಪಿಯ ಚುನಾವಣಾ ಪ್ರಚಾರಕ್ಕೆ ಪ್ರತಿ ತಂತ್ರ ರೂಪಿಸುವ ಸಾಧ್ಯತೆ ಇದ್ದು, ಅದಕ್ಕಾಗಿ ಕಾಂಗ್ರೆಸ್ ಅವರಿಗೆ ಹೆಚ್ಚಿನ ಜವಾಬ್ದಾರಿ ಹೊರಿಸಿದೆ. ಹಾಗೆಯೇ ತನ್ವರ್ ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್‌ಮಾಜಿ ಅಧ್ಯಕ್ಷರಾಗಿದ್ದು, ಯುವ ದಲಿತ ಮುಖಂಡರಾಗಿದ್ದಾರೆ. ಜತೆಗೆ ರಾಹುಲ್‌ಗೆ ಆಪ್ತರೂ ಆಗಿದ್ದಾರೆ.

ಪರಿಶಿಷ್ಟ ಜಾತಿಯ ಜನರ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವ ಮೂಲಕ ಕಾಂಗ್ರೆಸ್ ತನ್ನ ಬಲ ವೃದ್ಧಿಸಿಕೊಳ್ಳಲು ಯತ್ನಿಸುತ್ತಿದ್ದು, ಅದಕ್ಕಾಗಿಯೇ ದಲಿತ ಮುಖಂಡರಿಗೆ ಹೆಚ್ಚಿನ ಜವಾಬ್ದಾರಿ ಹೊರಿಸಿದೆ.
ಚುನಾವಣೆ ಅನುಭವ ಹೊಂದಿರುವ ವ್ಯಕ್ತಿಗಳನ್ನೇ ಪಕ್ಷದ ವತಿಯಿಂದ ಈ 89 ಕ್ಷೇತ್ರಗಳಲ್ಲಿ ಚುನಾವಣಾ ವೀಕ್ಷಕರನ್ನಾಗಿಯೂ ನೇಮಿಸಲು ಪಕ್ಷ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.