ADVERTISEMENT

ಚೆಕ್ ತಿರಸ್ಕೃತ: ಮಲ್ಯಗೆ ವಾರೆಂಟ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST
ಚೆಕ್ ತಿರಸ್ಕೃತ: ಮಲ್ಯಗೆ ವಾರೆಂಟ್
ಚೆಕ್ ತಿರಸ್ಕೃತ: ಮಲ್ಯಗೆ ವಾರೆಂಟ್   

ಹೈದರಾಬಾದ್: ಹೈದರಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಕಂಪೆನಿಗೆ ನೀಡಲಾಗಿದ್ದ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಮೆಟ್ರೋಪಾಲಿಟಿನ್ ನ್ಯಾಯಾಲಯದ ನ್ಯಾಯಾಧೀಶರು ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಅಧ್ಯಕ್ಷ ವಿಜಯ್ ಮಲ್ಯ ಅವರ ವಿರುದ್ಧ  ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದಾರೆ.

ತಮ್ಮ ಕಕ್ಷಿಗಾರ ಮಲ್ಯ ಅವರು ವಿದೇಶಿ ಪ್ರವಾಸದಲ್ಲಿ ಇರುವುದರಿಂದ ವೈಯಕ್ತಿಕವಾಗಿ ಅವರು ನ್ಯಾಯಾ ಲಯದಲ್ಲಿ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಮಲ್ಯ ಪರ ವಕೀಲರು ತಿಳಿಸಿದರೂ  ಪುರಸ್ಕೃರಿಸದ ನ್ಯಾಯಾಧೀಶರು ವಾರೆಂಟ್ ಜಾರಿಗೆ ಆದೇಶಿಸಿದರು.

ವಿಮಾನ ಸಂಚಾರ, ನಿಲುಗಡೆ ಮತ್ತು ಲ್ಯಾಂಡಿಂಗ್ ಶುಲ್ಕವೆಂದು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಗೆ ಕಿಂಗ್‌ಫಿಷರ್ ಏರ್‌ಲೈನ್ಸ್ ಕಂಪೆನಿಯು 10.3 ಕೋಟಿ ರೂಪಾಯಿಗಳ ಪಾವತಿಗೆ  ನೀಡಿದ್ದ ನಾಲ್ಕು ಚೆಕ್‌ಗಳು ಬೌನ್ಸ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಮಲ್ಯ ವಿರುದ್ಧ ನಾಂಪಲ್ಲಿ ನ್ಯಾಯಾಲಯದಲ್ಲಿ ಕ್ರಮಿನಲ್ ಪ್ರಕರಣ ದಾಖಲಾಗಿತ್ತು.

ಕಿಂಗ್‌ಫಿಷರ್ ಏರ್‌ಲೈನ್ಸ್ ಸಂಸ್ಥೆಯ ಚೆಕ್ ಬೌನ್ಸ್ ಪ್ರಕರಣ ಇದೇ ಮೊದಲಲ್ಲ. ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಿಸುತ್ತಿರುವ ಜಿವಿಕೆ ಸಮೂಹ ಕಂಪೆನಿಗೆ ನೀಡಿದ್ದ ಚೆಕ್‌ಗಳೂ ಬೌನ್ಸ್ ಆಗಿದ್ದು, ಅಲ್ಲಿಯೂ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ವಾರೆಂಟ್ ಹೊರಡಿಸಿದ  ಸುದ್ದಿ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಮಲ್ಯ ಒಡೆತನದ ಕಿಂಗ್ ಫಿಷರ್ ಏರ್‌ಲೈನ್ಸ್ ಮತ್ತು ಮದ್ಯ ಕಂಪೆನಿಗಳ ಷೇರುಗಳ ಬೆಲೆ ಇಳಿಮುಖವಾದವು. ಕಿಂಗ್‌ಫಿಷರ್ ಏರ್‌ಲೈನ್ಸ್ ಭಾರಿ ನಷ್ಟ ಅನುಭವಿಸುತ್ತಿರುವುದರಿಂದ ಕಳೆದ ಕೆಲವು ತಿಂಗಳಿಂದ ನೌಕರರಿಗೆ   ಸಂಬಳ ನೀಡಲು ಸಾಧ್ಯವಾಗಿಲ್ಲ ಮತ್ತು ವಿಮಾನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಕಿಂಗ್‌ಫಿಷರ್ ಬೀಗಮುದ್ರೆ ಮುಂದುವರಿಕೆ (ನವದೆಹಲಿ ವರದಿ): ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಬೀಗಮುದ್ರೆ ಇನ್ನೂ ಒಂದು ವಾರ ಮುಂದುವರಿಯಲಿದೆ. ಕಳೆದ ಕೆಲವು ತಿಂಗಳುಗಳಿಂದ ಸಂಬಳವಿಲ್ಲದೆ ಪರದಾಡುತ್ತಿರುವ ಸಿಬ್ಬಂದಿ ಪ್ರತಿಭಟನೆ ಮುಂದುವರಿಸಿದ್ದು, ಕೆಲಸಕ್ಕೆ ಮರಳುವಂತೆ ಅವರ ಮನವೊಲಿಸುವ ಆಡಳಿತ ವರ್ಗದ ಪ್ರಯತ್ನ ವಿಫಲವಾಗಿದೆ.

ಈ ಹಿನ್ನೆಲೆಯಲ್ಲಿ ಬೀಗಮುದ್ರೆ ಈ ತಿಂಗಳ 20ರ ವರೆಗೆ ಮುಂದುವರಿಯಲಿದೆ ಎಂದು ಅಧಿಕೃತ ಪ್ರಕಟಣೆ  ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.