ADVERTISEMENT

ಜಗನ್ ನ್ಯಾಯಾಂಗ ಬಂಧನ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 19:39 IST
Last Updated 5 ಡಿಸೆಂಬರ್ 2012, 19:39 IST

ಹೈದರಾಬಾದ್(ಪಿಟಿಐ): ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬಂಧಿತರಾಗಿರುವ ವೈಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ  ಜಗನ್‌ಮೋಹನ್ ರೆಡ್ಡಿ ಮತ್ತು ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಂಧಿತರಾಗಿರುವ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಭಾವ ಬಿ.ವಿ. ಶ್ರೀನಿವಾಸ ರೆಡ್ಡಿ, ಮೆಫೋಜ್ ಅಲಿ ಖಾನ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಡಿಸೆಂಬರ್ 19ರವರೆಗೆ ವಿಸ್ತರಿಸಿದೆ.

ಚಂಚಲಗುಡ ಜೈಲಿನಲ್ಲಿದ್ದ ಜಗನ್ ಮೋಹನ್ ರೆಡ್ಡಿ, ಮಾಜಿ ಸಚಿವ ಮೋಪಿದೇವಿ ವೆಂಕಟರಮಣ ರಾವ್, ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಮತ್ತು ಇತರರನ್ನು ಬಿಗಿ ಭದ್ರತೆಯೊಂದಿಗೆ ಹೆಚ್ಚುವರಿ ಸಿಬಿಐ ವಿಶೇಷ ನ್ಯಾಯಾಲಯ ಮುಂದೆ ಬುಧವಾರ ಹಾಜರುಪಡಿಸಲಾಗಿತ್ತು. ಆಂಧ್ರದ ಸಚಿವ ಧರ್ಮನ ಪ್ರಸಾದ್ ರಾವ್ ಕೂಡ ನ್ಯಾಯಾಲಯಕ್ಕೆ ಹಾಜರಾದರು.

ಸಿಬಿಐ ವಿಶೇಷ ನ್ಯಾಯಾಲಯ ಜಗನ್ ಜಾಮೀನು ಅರ್ಜಿಯನ್ನು ಮಂಗಳವಾರ ವಜಾಗೊಳಿಸಿತ್ತು. ಜಗನ್ ಅವರು ಆಂಧ್ರದ ಹೈಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಡಿ. 11ರಂದು ವಿಚಾರಣೆಗೆ ಬರಲಿದೆ.

ಜನಾರ್ದನ ರೆಡ್ಡಿ ಜಾಮೀನು ಅರ್ಜಿ ವಜಾ
ಧಾರವಾಡ: ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ಮೂಲಕ ನಡೆಸಿದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾಮೀನು ನೀಡುವಂತೆ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.

ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ ಅವರು, ಆದೇಶವನ್ನು ಕಾಯ್ದಿರಿಸಿತ್ತು. ರೊಟೇಷನ್ ಅನ್ವಯ ಹೈಕೋರ್ಟ್‌ನ ಇಲ್ಲಿನ ಸಂಚಾರಿ ಪೀಠದಲ್ಲಿ ಕರ್ತವ್ಯದಲ್ಲಿರುವ ನ್ಯಾಯಮೂರ್ತಿಗಳು ಬುಧವಾರ ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.