ನವದೆಹಲಿ (ಪಿಟಿಐ): ಉತ್ತರ ಪ್ರದೇಶದಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದ್ದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ತಾನು ಜನಾದೇಶಕ್ಕೆ ತಲೆಬಾಗುವುದಾಗಿ ತಿಳಿಸಿದೆ. ಆದರೆ ಫಲಿತಾಂಶವು ಪಕ್ಷಕ್ಕೆ ಹಿನ್ನಡೆಯಲ್ಲ ಎಂದು ಹೇಳಿದೆ.
`ಜನಾದೇಶ ಏನೇ ಇರಲಿ, ನಾವು ಅದನ್ನು ಒಪ್ಪಿಕೊಂಡಿದ್ದೇವೆ. ಈ ಫಲಿತಾಂಶವನ್ನು ನಿರೀಕ್ಷಿಸಿರಲಿಲ್ಲ. ನಾವು ಎಡವಿದ್ದು ಎಲ್ಲಿ ಎನ್ನುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ~ ಎಂದು ಪಕ್ಷದ ವಕ್ತಾರ ರಶೀದ್ ಅಲ್ವಿ ಹೇಳಿದ್ದಾರೆ.
ಕೇಂದ್ರದ ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಕೂಡ ಇದೇ ಅನಿಸಿಕೆ ವ್ಯಕ್ತಪಡಿಸಿದ್ದಾರೆ.ಒಂದು ವೇಳೆ ಬಹುಮತ ಬರದಿದ್ದರೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದಾಗಿ ಸೋಮವಾರ ಪಕ್ಷದ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಹೇಳಿದ್ದರು.
`ಪಕ್ಷವು ಮಾಯಾವತಿ ಅವರ ವಿರುದ್ಧ ಮಾಡಿದ ಪ್ರಚಾರ ಫಲಿಸಿದೆ. ಆದರೆ ಪಕ್ಷವು ಸಂಘಟನೆ ಕೊರತೆಯಿಂದ ಇದರ ಲಾಭ ಪಡೆಯಲು ಸಾಧ್ಯವಾಗಲಿಲ್ಲ~ ಎಂದು ಸಂವಹನ ಖಾತೆ ರಾಜ್ಯ ಸಚಿವ ಸಚಿಲ್ ಪೈಲಟ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿರುವುದಕ್ಕೆ ರಾಹುಲ್ ಗಾಂಧಿ ಹೊಣೆಯಲ್ಲ. ಇದಕ್ಕೆ ಹಲವಾರು ಕಾರಣಗಳಿವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡರು ಉತ್ತರ ಪ್ರದೇಶದಲ್ಲಿ ತಾರಾ ಪ್ರಚಾರಕರಾಗಿದ್ದ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
`ರಾಹುಲ್ ಗಾಂಧಿ ತಾರಾ ಪ್ರಚಾರಕರಾಗಿದ್ದರು. ಅವರಿಂದಾಗಿಯೇ ರಾಜ್ಯದ ಜನರು ಕಾಂಗ್ರೆಸ್ ಬಗ್ಗೆ ಮಾತನಾಡಿಕೊಳ್ಳಲು ಶುರು ಮಾಡುವಂತಾಯಿತು. 2014ರ ಲೋಕಸಭೆ ಚುನಾವಣೆವರೆಗೂ ಉತ್ತರ ಪ್ರದೇಶದಲ್ಲಿ ಪಕ್ಷದ ಹೋರಾಟ ಮುಂದುವರಿಯಲಿದೆ~ ಎಂದು ಸಚಿವ ಆರ್.ಪಿ.ಎನ್.ಸಿಂಗ್ ಹೇಳಿದ್ದಾರೆ.
`ದಲಿತರ ರಾಜಧಾನಿ~ಯಲ್ಲಿ ಮಾಯಾಗೆ ನಿಷ್ಠೆ
ಆಗ್ರಾ (ಐಎಎನ್‌ಎಸ್): ಉತ್ತರ ಪ್ರದೇಶದ ಇತರ ಕಡೆ ಬಹುಜನ ಸಮಾಜ ಪಕ್ಷ ಸೋಲು ಕಂಡರೂ, `ದಲಿತರ ರಾಜಧಾನಿ~ ಎಂದೇ ಗುರುತಿಸಿಕೊಂಡಿರುವ ಆಗ್ರಾ ಮಾತ್ರ ಪಕ್ಷದ ನಾಯಕಿ ಮಾಯಾವತಿ ಅವರ ಕೈಬಿಡಲಿಲ್ಲ. ಇಲ್ಲಿ ಪಕ್ಷದ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಎಸ್‌ಪಿ ವಿಜಯ; ಉಮಾ ಕಳವಳ
ನವದೆಹಲಿ (ಐಎನ್‌ಎಸ್): ಉತ್ತರ ಪ್ರದೇಶದಲ್ಲಿ ಸಮಜವಾದಿ ಪಕ್ಷವು (ಎಸ್‌ಪಿ) ಜಯಭೇರಿ ಬಾರಿಸಿರುವುದಕ್ಕೆ ಬಿಜೆಪಿ ತೀವ್ರ ಕಳವಳ ವ್ಯಕ್ತಪಡಿಸಿದೆ.
`ಎಸ್‌ಪಿ ಅಧಿಕಾರದಲ್ಲಿ ಅಪರಾಧಗಳು ಹೆಚ್ಚಾಗುತ್ತವೆ. ಹಾಗಾಗಿ ನನಗೆ ರಾಜ್ಯದ ಜನರ ಸುರಕ್ಷೆಯ ಬಗ್ಗೆ ಆತಂಕವಾಗಿದೆ~ ಎಂದು ಉಮಾ ಭಾರತಿ ಹೇಳಿದ್ದಾರೆ.
ಇಂದು ಎಸ್‌ಪಿ ಸಂಸದೀಯ ಮಂಡಳಿ ಸಭೆ
ಲಖನೌ (ಪಿಟಿಐ): ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲು ಬುಧವಾರ ಬೆಳಿಗ್ಗೆ 11 ಗಂಟೆಗೆ ಎಸ್‌ಪಿ ಸಂಸದೀಯ ಮಂಡಳಿಯ ಸಭೆ ನಡೆಯಲಿದೆ.
ಎಸ್‌ಪಿಯು ಯುಪಿಎ ಸರ್ಕಾರಕ್ಕೆ ಬೆಂಬಲ ಮುಂದುವರಿಸಲಿದೆ ಎಂದು ಪಕ್ಷದ ವಕ್ತಾರ ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರು ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ ಎಂದು ಪಕ್ಷದ ಮುಖಂಡ ಶಿವಪಾಲ್ ಸಿಂಗ್ ಯಾದವ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
`ಸೋಲಿಗೆ ಉಮಾ ಕಾರಣರಲ್ಲ~
ನವದೆಹಲಿ (ಐಎಎನ್‌ಎಸ್): ಉತ್ತರ ಪ್ರದೇಶದಲ್ಲಿ ಪಕ್ಷದ ಹಿನ್ನಡೆಗೆ ಅಲ್ಲಿನ ಚುನಾವಣಾ ಉಸ್ತುವಾರಿಯ ಹೊಣೆ ಹೊತ್ತಿದ್ದ ಉಮಾ ಭಾರತಿ ಕಾರಣರಲ್ಲ ಎಂದು ಬಿಜೆಪಿ ಮುಖಂಡ ಅನುರಾಗ್ ಠಾಕೂರ್ ಸಮರ್ಥಿಸಿಕೊಂಡಿದ್ದಾರೆ. `ಸೋಲಿಗೆ ಉಮಾ ಅವರತ್ತ ಬೊಟ್ಟು ಮಾಡುವುದು ಸರಿಯಲ್ಲ. ಗೆಲ್ಲದಿರುವುದಕ್ಕೆ ಅನೇಕ ಕಾರಣಗಳಿವೆ. ಅವನ್ನೆಲ್ಲ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ~ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.