ADVERTISEMENT

ಜನ ಲೋಕಪಾಲ ಅಂಗೀಕಾರಕ್ಕೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2011, 19:30 IST
Last Updated 10 ಏಪ್ರಿಲ್ 2011, 19:30 IST
ಜನ ಲೋಕಪಾಲ ಅಂಗೀಕಾರಕ್ಕೆ ಸಿದ್ಧ
ಜನ ಲೋಕಪಾಲ ಅಂಗೀಕಾರಕ್ಕೆ ಸಿದ್ಧ   

ತಿರುವನಂತಪುರ (ಪಿಟಿಐ): ಪ್ರತಿಪಕ್ಷಗಳು ಸಹಕಾರ ನೀಡಿದರೆ ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಜನ ಲೋಕಪಾಲ ಮಸೂದೆ ಮಂಡಿಸಲು ಮತ್ತು ಅಂಗೀಕರಿಸಲು ಯುಪಿಎ ಸರ್ಕಾರ ಸಿದ್ಧ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಭಾನುವಾರ ಹೇಳಿದ್ದಾರೆ.

ಸಂಸತ್ತಿನ ಮುಂದಿನ ಅಧಿವೇಶನದಲ್ಲೇ ಜನ ಲೋಕಪಾಲ ಮಸೂದೆ ಮಂಡಿಸಿ ಅಂಗೀಕರಿಸಬೇಕೆಂಬ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರ ಬೇಡಿಕೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಪ್ರತಿಪಕ್ಷಗಳು ಇದಕ್ಕೆ ಸಹಕಾರ ನೀಡಿದರೆ ಈ ಮಸೂದೆಯನ್ನು ಅಂಗೀಕರಿಸುವಂತೆ ಮಾಡಲು ನಮಗೆ ಸಂತೋಷ ಆಗುತ್ತದೆ’ ಎಂದಿದ್ದಾರೆ.

‘ಬಿಜೆಪಿ ಪ್ರಮುಖ ವಿರೋಧ ಪಕ್ಷ. ಪಕ್ಷದ ಸಲಹೆಯನ್ನು ನಾನು ಖಂಡಿತ ಸ್ವಾಗತಿಸುತ್ತೇನೆ. ಅವರು (ಅಡ್ವಾಣಿ) ತಮ್ಮ ಸದಸ್ಯರ ಮನವೊಲಿಸಿದರೆ ನಾವು ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸದೆ ಅಂಗೀಕರಿಸುವಂತೆ ಮಾಡಲು ಸಂತೋಷವಾಗಿ ಒಪ್ಪುತ್ತೇವೆ. ಆದರೆ ವೇದಿಕೆಗಳಿಂದ ಘೋಷಣೆಗಳನ್ನು ಮಾಡುವ ಬದಲು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅವರ ಸದಸ್ಯರು ನಮಗೆ ಸಹಕಾರ ನೀಡುತ್ತಾರೆ ಎಂಬ ಭರವಸೆಯನ್ನು ಅವರು ಮೊದಲು ನೀಡಲಿ’ ಎಂದು ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮುಖರ್ಜಿ ತಿಳಿಸಿದ್ದಾರೆ.

ADVERTISEMENT

ಯುಪಿಎ ಸರ್ಕಾರ ‘ಸ್ವತಂತ್ರ ಭಾರತ ಕಂಡರಿಯದ ಅತ್ಯಂತ ಭ್ರಷ್ಟ ಸರ್ಕಾರ’ ಎಂದು ಬಣ್ಣಿಸಿ ಅಡ್ವಾಣಿ ವಿರುದ್ಧ ಹರಿಹಾಯ್ದ ಪ್ರಣವ್ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 1998ರಿಂದ 2004ರವರೆಗೆ ಅಧಿಕಾರದಲ್ಲಿ ಇದ್ದಾಗ ಲೋಕಪಾಲ ಮಸೂದೆ ಜಾರಿಗೆ ಯಾವ ಯತ್ನ ಮಾಡಿತ್ತು ಎಂಬುದನ್ನೂ ತಿಳಿಯಬಯಸಿದ್ದಾರೆ.

‘ಅಡ್ವಾಣಿ ಏನು ಮಾಡಿದ್ದಾರೆ? ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಗೃಹ ಸಚಿವರಾಗಿದ್ದ ಅಡ್ವಾಣಿ ಅವರಿಗೆ ಲೋಕಪಾಲ ಮಸೂದೆ ಅಂಗೀಕರಿಸಲು ಯಾಕೆ ಸಾಧ್ಯವಾಗಲಿಲ್ಲ?’ ಎಂದೂ ಮುಖರ್ಜಿ ಪ್ರಶ್ನಿಸಿದ್ದಾರೆ.

ಲೋಕಪಾಲ ಕರಡು ರಚನೆ ಸಮಿತಿಯಲ್ಲಿ ವಕೀಲರಾದ ತಂದೆ- ಮಗ ಶಾಂತಿಭೂಷಣ್ ಮತ್ತು ಪ್ರಶಾಂತ್‌ಭೂಷಣ್ ಅವರನ್ನು  ಸದಸ್ಯರಾಗಿ ಮಾಡಿರುವ ಬಗ್ಗೆ ಯೋಗ ಗುರು ರಾಮ್‌ದೇವ್ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಈ ಹೆಸರುಗಳು ಅಣ್ಣಾ ಹಜಾರೆ ಅವರೇ ಶಿಫಾರಸು ಮಾಡಿದ್ದು ಎಂದಿದ್ದಾರೆ.

ಸಮಿತಿಯ ಅರ್ಧದಷ್ಟು ಸದಸ್ಯರನ್ನು ಸರ್ಕಾರ ಮತ್ತು ಇತರ ಅರ್ಧದಷ್ಟು ಸದಸ್ಯರನ್ನು ಚಳವಳಿಕಾರರು ಆಯ್ಕೆ ಮಾಡಬೇಕು ಎಂದು ಒಪ್ಪಂದವಾಗಿದೆ. ಸರ್ಕಾರದ ಪರವಾಗಿ ಪ್ರಧಾನಿ ಆಯ್ಕೆ ಮಾಡುತ್ತಾರೆ ಮತ್ತು ನಾಗರಿಕರ ತಂಡದ ಪ್ರತಿನಿಧಿಗಳನ್ನು ಅಣ್ಣಾ ಹಜಾರೆ ಅವರೇ ಆಯ್ಕೆ   ಮಾಡುತ್ತಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.