ADVERTISEMENT

ಜಯಮಾಲಾ ವಿಚಾರಣೆಗೆ ತಡೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 19:30 IST
Last Updated 13 ಅಕ್ಟೋಬರ್ 2011, 19:30 IST

ಕೊಚ್ಚಿ (ಐಎಎನ್‌ಎಸ್): ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಿಸಿ ವಿವಾದಕ್ಕೆ ಒಳಗಾಗಿರುವ ಕನ್ನಡ ಚಿತ್ರನಟಿ ಜಯಮಾಲಾ ಮತ್ತು ಇನ್ನಿಬ್ಬರ ವಿರುದ್ಧ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿದೆ. ಇದರಿಂದ ಜಯಮಾಲಾ ಅವರಿಗೆ ತಾತ್ಕಾಲಿಕ ನೆಮ್ಮದಿ ದೊರೆತಂತಾಗಿದೆ. 

1987ರಲ್ಲಿ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿಯನ್ನು ತಾವು ಸ್ಪರ್ಶಿಸಿದ್ದಾಗಿ ಜಯಮಾಲಾ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿ ಪ್ರಕರಣ ದಾಖಲಾಗಿತ್ತು.

ವಿಚಾರಣೆ ನಡೆಸಿದ ರಾನ್ನಿ ನ್ಯಾಯಾಲಯ ಜಯಮಾಲಾ, ಜೋತಿಷಿ ಪಿ.ಉನ್ನಿ ಕೃಷ್ಣನ್ ಮತ್ತು ಅವರ ಸಹಾಯಕ ರಘುಪತಿ ಅವರಿಗೆ ಸಮನ್ಸ್ ನೀಡಿತ್ತು. ಕಳೆದ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ನೇಮಕ ಮಾಡಿದ್ದ ವಿಶೇಷ ತಂಡ ನಟಿಯ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆ ಹಿನ್ನೆಲೆಯಲ್ಲಿ ಕೆಳಹಂತದ ನ್ಯಾಯಾಲಯ ನಟಿ ಹಾಗೂ ಇತರ ಇಬ್ಬರ ವಿಚಾರಣೆಗೆ ಮುಂದಾಗಿತ್ತು.

ADVERTISEMENT

ನ್ಯಾಯಾಲಯದ ಈ ಕ್ರಮವನ್ನು ಪ್ರಶ್ನಿಸಿ ಜಯಮಾಲಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 1991ರವರೆಗೆ ಮಹಿಳೆಯರಿಗೆ ದೇವಸ್ಥಾನದೊಳಗೆ ಪ್ರವೇಶಿಸಲು ಅನುಮತಿ ಇದ್ದ ಕಾರಣ 1987ಕ್ಕೂ ನಾಲ್ಕು ವರ್ಷ ಮೊದಲೇ ತಾವು ಪ್ರವೇಶಿಸಿದ್ದಾಗಿ ಅವರು ಅರ್ಜಿಯಲ್ಲಿ ವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.