ADVERTISEMENT

ಜಯಾ, ಮಮತಾಗೆ ಮತ್ತೆ ಅಧಿಕಾರ?

ಇಂಡಿಯಾ ಟಿ.ವಿ– ಸಿ ವೋಟರ್‌ ಸಮೀಕ್ಷೆ: ಕೇರಳದಲ್ಲಿ ಎಲ್‌ಡಿಎಫ್‌, ಅಸ್ಸಾಂ ಅತಂತ್ರ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2016, 20:02 IST
Last Updated 1 ಏಪ್ರಿಲ್ 2016, 20:02 IST
ಜಯಾ, ಮಮತಾಗೆ ಮತ್ತೆ ಅಧಿಕಾರ?
ಜಯಾ, ಮಮತಾಗೆ ಮತ್ತೆ ಅಧಿಕಾರ?   

ನವದೆಹಲಿ (ಪಿಟಿಐ): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಅಧಿಕಾರಕ್ಕೇರಲಿದ್ದು, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಕ್ರಮವಾಗಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹಾಗೂ ಎಐಎಡಿಎಂಕೆ ಮತ್ತೆ ಅಧಿಕಾರ ಹಿಡಿಯುವ ಸಾಧ್ಯತೆಯಿದೆ ಎಂದು ‘ಇಂಡಿಯಾ ಟಿ.ವಿ.– ಸಿ ವೋಟರ್‌’ ಜನಮತ ಸಮೀಕ್ಷೆ ತಿಳಿಸಿದೆ.

ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 55 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದ್ದು, ಬಹುಮತಕ್ಕೆ 9 ಸ್ಥಾನಗಳ ಕೊರತೆ ಎದುರಿಸಬೇಕಾಗಬಹುದು ಎಂದು ಸಮೀಕ್ಷೆ ಹೇಳಿದೆ. 126 ಸದಸ್ಯಬಲದ ವಿಧಾನಸಭೆಯಲ್ಲಿ ಈಗ ಆಡಳಿತದಲ್ಲಿರುವ ಕಾಂಗ್ರೆಸ್‌ 53 ಸ್ಥಾನಗಳಿಗೆ ತೃಪ್ತಿಪಡಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಮಾರ್ಚ್‌ ಕೊನೆಯ ವಾರದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಬಂಗಾಳದಲ್ಲಿ ಮತ್ತೆ ಮಮತಾ: ಎಡ ರಂಗದ ತೀವ್ರ ಪ್ರತಿಸ್ಪರ್ಧೆಯ ಮಧ್ಯೆಯೂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಮತ್ತೆ ಅಧಿಕಾರಕ್ಕೇರಲಿದೆ.

ಒಟ್ಟು 294 ಸದಸ್ಯಬಲದ ವಿಧಾನ ಸಭೆಯಲ್ಲಿ ಟಿಎಂಸಿ 160 ಸ್ಥಾನಗಳನ್ನು ಗೆಲ್ಲಲಿದೆ. ಟಿಎಂಸಿ ಐದು ವರ್ಷಗಳ ಹಿಂದೆ 184 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಿತ್ತು.  ಸಿಪಿಎಂ–ಕಾಂಗ್ರೆಸ್‌ ಮೈತ್ರಿಕೂಟ 137 ಸ್ಥಾನಗಳಲ್ಲಿ (ಎಡ ರಂಗ–106, ಕಾಂಗ್ರೆಸ್‌ 21) ಗೆಲುವು ಪಡೆಯಲಿವೆ. 

ತಮಿಳುನಾಡಿನಲ್ಲಿ ಎಐಎಡಿಎಂಕೆ: ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಮೈತ್ರಿಕೂಟ 130 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆಯಲಿದೆ. ಡಿಎಂಕೆ–ಕಾಂಗ್ರೆಸ್‌ ಮೈತ್ರಿಕೂಟ 70 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಆದರೆ ಬಿಜೆಪಿ ಮೈತ್ರಿಕೂಟ ಇಲ್ಲಿ ಯಾವುದೇ ಸ್ಥಾನ ಪಡೆಯದು ಎಂದ ಸಮೀಕ್ಷೆ ತಿಳಿಸಿದೆ.

140 ಸದಸ್ಯಬಲದ ಕೇರಳ ವಿಧಾ ಸಭೆಯಲ್ಲಿ ಎಲ್‌ಡಿಎಫ್‌ 86 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂಬುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.