ADVERTISEMENT

ಜಾಗ್ರತೆ ವಹಿಸಲು ಪಡೆಗಳಿಗೆ ಆಂಟನಿ ಕರೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ):  ಕಾಬೂಲ್‌ನಲ್ಲಿ ಭಾನುವಾರ ನಡೆದ ತಾಲಿಬಾನ್ ಸರಣಿ ದಾಳಿಗಳ ಹಿನ್ನೆಲೆಯಲ್ಲಿ ಜಾಗರೂಕರಾಗಿರುವಂತೆ ಸೇನಾಪಡೆಗಳ ಮುಖ್ಯಸ್ಥರಿಗೆ ರಕ್ಷಣಾ ಸಚಿವ ಎ.ಕೆ.ಆಂಟನಿ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಇಲ್ಲಿ ಆರಂಭವಾದ ಉನ್ನತ ಸೇನಾ ಕಮಾಂಡರ್‌ಗಳ ಮೂರು ದಿನಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಆಫ್ಘಾನಿಸ್ತಾನದ ಬೆಳವಣಿಗೆ ಹಿನ್ನೆಲೆಯಲ್ಲಿ ಅತ್ಯಂತ ಎಚ್ಚರಿಕೆಯಿಂದ ಇದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಆಫ್ಘಾನಿಸ್ತಾನ, ಬಾಹ್ಯ ಶಕ್ತಿಗಳ ಮಧ್ಯ ಪ್ರವೇಶದಿಂದ ಸಂಪೂರ್ಣ ಮುಕ್ತವಾಗಿ ಸ್ಥಿರ ಹಾಗೂ ಸದೃಢ ರಾಷ್ಟ್ರವಾಗಿ ಮಾರ್ಪಡಲು ಅಗತ್ಯವಾದ ಎಲ್ಲ ನೆರವನ್ನೂ ಭಾರತ ನೀಡಲಿದೆ ಎಂದರು.

ಈ ಮಧ್ಯೆ, ಸೇನಾಪಡೆಗಳ ರೆಜಿಮೆಂಟ್‌ಗಳಲ್ಲಿ ಕೇವಲ ನಾಲ್ಕು ದಿನಗಳಿಗಾಗುವಷ್ಟು ಆಯುಧಗಳು ಮಾತ್ರ ಸಂಗ್ರಹಗೊಂಡಿವೆ ಎಂಬ ವರದಿ  ತಳ್ಳಿಹಾಕಿದ ಆಂಟನಿ, ಹಿಂದಿನ ದಿನಗಳಿಗೆ ಹೋಲಿಸಿದಲ್ಲಿ ಭಾರತ ಹೆಚ್ಚು ದೃಢವಾಗಿದೆ ಎಂದರು.

ದೇಶದ ರಕ್ಷಣೆಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಮ್ಮೇಳನದಲ್ಲಿ ಕಮಾಂಡರ್‌ಗಳು ಪರಾಮರ್ಶೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.