ADVERTISEMENT

ಜಾಮೀನಿನ ಬಿಡುಗಡೆ ಆರೋಪಿಯ ಹಕ್ಕಲ್ಲ: ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST

ನವದೆಹಲಿ: ಜಾಮೀನಿನಲ್ಲಿ ಬಿಡುಗಡೆಯಾಗುವುದು ಆರೋಪಿಯ ಹಕ್ಕು ಎಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಅಶೋಕ್‌ ಭೂಷಣ್‌ ಅವರ ಪೀಠ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 88 ಅನ್ನು ವ್ಯಾಖ್ಯಾನಿಸಿದೆ. ಆರೋಪಿಗೆ ಜಾಮೀನು ನೀಡುವುದು ನ್ಯಾಯಾಧೀಶರ ಕರ್ತವ್ಯ ಎಂದು ಈ ಸೆಕ್ಷನ್‌ ಹೇಳುವುದಿಲ್ಲ. ಜಾಮೀನು ನೀಡುವುದು ಅಥವಾ ನೀಡದಿರುವುದು ನ್ಯಾಯಾಧೀಶರ ವಿವೇಚನೆಗೆ ಬಿಟ್ಟ ವಿಚಾರ ಎಂದೇ ಈ ಸೆಕ್ಷನ್‌ ಹೇಳುತ್ತದೆ ಎಂದು ಪೀಠ ತಿಳಿಸಿದೆ.

ಯಾವುದೇ ವ್ಯಕ್ತಿಯ ಬಂಧನ ಅಥವಾ ಹಾಜರಾತಿಗಾಗಿ ಸಮನ್ಸ್‌ ನೀಡುವ ಅಧಿಕಾರ ಇರುವ ನ್ಯಾಯಾಧೀಶರ ಮುಂದೆ ಆ ವ್ಯಕ್ತಿಯು ಹಾಜರಾದಾಗ ಅವರ ಬಿಡುಗಡೆಗೆ ಭದ್ರತೆ ಸಹಿತ ಅಥವಾ ಭದ್ರತೆ ಇಲ್ಲದ ಬಾಂಡ್‌ ನೀಡಲು ನ್ಯಾಯಾಧೀಶರು ಸೂಚಿಸಬಹುದು.

ADVERTISEMENT

‘ಹೀಗೆ ನ್ಯಾಯಾಲಯಕ್ಕೆ ಹಾಜರಾದ ವ್ಯಕ್ತಿಗೆ ಜಾಮೀನು ಪಡೆಯುವ ಹಕ್ಕು ಇಲ್ಲ. ಹಾಗಾಗಿ ಆಯಾ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರ ನ್ಯಾಯಾಧೀಶರಿಗೆ ಇದೆ’ ಎಂದು ಪೀಠ ಹೇಳಿದೆ.

ಆರೋಪಿಯನ್ನು ವಿಚಾರಣೆಯ ಸಂದರ್ಭದಲ್ಲಿ ಬಂಧಿಸಲಾಗಿಲ್ಲ. ಅದಲ್ಲದೆ, ಆರೋ‍ಪಿಯು ಸ್ವತಃ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಹಾಗಾಗಿ ನ್ಯಾಯಾಧೀಶರು ಆರೋಪಿಯನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಲೇಬೇಕು ಎಂದು ತಮ್ಮ ಕಕ್ಷಿದಾರರೊಬ್ಬರ ಪರವಾಗಿ ಹಿರಿಯ ವಕೀಲ ಮುಕುಲ್‌ ರೋಹಟಗಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯ ವಿಚಾರಣೆ ನಡೆಸಲು ಪೀಠ ಒಪ್ಪಲಿಲ್ಲ.

ಉತ್ತರ ಪ್ರದೇಶದ ಮುಖ್ಯ ಎಂಜಿನಿಯರ್‌ ಯಾದವ್‌ ಸಿಂಗ್‌ ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ಸಹ ಆರೋಪಿ ಪಂಕಜ್‌ ಜೈನ್‌ ಪರವಾಗಿ ರೋಹಟಗಿ ಅರ್ಜಿ ಸಲ್ಲಿಸಿದ್ದಾರೆ. ಪಂಕಜ್‌ ಜಾಮೀನು ಅರ್ಜಿಯನ್ನು ಸಿಬಿಐ ನ್ಯಾಯಾಧೀಶ ಮತ್ತು ಅಲಹಾಬಾದ್‌ ಹೈಕೋರ್ಟ್‌ ವಜಾ ಮಾಡಿದ್ದನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.