ADVERTISEMENT

ಜಾಮೀನು ಕೋರಿ ಜಗನ್ ಅರ್ಜಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2012, 19:30 IST
Last Updated 16 ನವೆಂಬರ್ 2012, 19:30 IST

ಹೈದರಾಬಾದ್: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಇಲ್ಲಿನ ಚಂಚಲಗುಡ ಜೈಲಿನಲ್ಲಿ ಬಂಧನದಲ್ಲಿರುವ ವೈಎಸ್‌ಆರ್ ಕಾಂಗ್ರೆಸ್ ನಾಯಕ ಹಾಗೂ ಕಡಪಾ ಸಂಸದ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಅವರು ಜಾಮೀನು ಕೋರಿ ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಈ ಮುನ್ನ ಜೂನ್ 1ರಂದು ಜಗನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಹುದು ಎಂಬ ಕಾರಣ ನೀಡಿ ನ್ಯಾಯಾಲಯವು ವಜಾ ಮಾಡಿತ್ತು. ಸುಪ್ರೀಂ ಕೋರ್ಟ್ ಸಹ ಜಾಮೀನು ನಿರಾಕರಿಸಿತ್ತು. ಅವರ ವಿರುದ್ಧ ದಾಖಲಾಗಿರುವ 7 ಪ್ರಕರಣಗಳ ತನಿಖೆಯನ್ನು ಸಿಬಿಐ ಪೂರ್ಣಗೊಳಿಸಿದ ನಂತರ ಅವರು ಜಾಮೀನು ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿ ಅಲ್ತಾಫ್ ಅಲಂ ಮತ್ತು ರಂಜನಾ ಪ್ರಕಾಶ್ ದೇಸಾಯಿ ಅವರಿದ್ದ ವಿಭಾಗೀಯ ಪೀಠ ನಿರ್ದೇಶಿಸಿತ್ತು.

`ತನಿಖೆಗೆ ಪೂರ್ಣ ಸಹಕಾರ ನೀಡಲಾಗುವುದು. ಪ್ರತ್ಯಕ್ಷವಾಗಿ ಇಲ್ಲವೆ ಪರೋಕ್ಷವಾಗಿ ಸಾಕ್ಷ್ಯಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ~ ಎಂದು ಜಾಮೀನು ಅರ್ಜಿಯಲ್ಲಿ ಜಗನ್ ತಿಳಿಸಿದ್ದಾರೆ. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಜಗನ್ ಮೇ 27ರಿಂದ ಜೈಲಿನಲ್ಲಿದ್ದಾರೆ.

ಶಾಸಕ ಅಮಾನತು:  ಪಕ್ಷ ವಿರೋಧಿ ಚಟುವಟಿಕೆಗಾಗಿ ಆಂಧ್ರದ ಪಲಮನೇರು ಕ್ಷೇತ್ರದ ಶಾಸಕ ಅಮರ್‌ನಾಥ್ ರೆಡ್ಡಿ ಅವರನ್ನು ಟಿಡಿಪಿಯಿಂದ ಅಮಾನತು ಮಾಡಲಾಗಿದೆ. ತೆಲಂಗಾಣ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಕುರಿತು ಚಂದ್ರಬಾಬು ನಾಯ್ಡು ಮತ್ತು ರೆಡ್ಡಿ ನಡುವೆ ಭಿನ್ನಾಭಿಪ್ರಾಯವಿತ್ತು. ಅಲ್ಲದೆ ರೆಡ್ಡಿ ಜೈಲಿನಲ್ಲಿರುವ ಜಗನ್‌ಮೋಹನ್ ರೆಡ್ಡಿಯನ್ನು ಭೇಟಿಯಾಗಿ ತೆಲಂಗಾಣದ ಬಗ್ಗೆ ಮಾತುಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅಮಾನತು ನಿರ್ಧಾರಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.