ADVERTISEMENT

ಜಾರ್ಖಂಡ್: ಪ್ರಣವ್ ಬೆಂಬಲಕ್ಕೆ ನಿಂತ ಬಿಜೆಪಿ ಮಿತ್ರಪಕ್ಷಗಳು

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 8:30 IST
Last Updated 17 ಜುಲೈ 2012, 8:30 IST

ರಾಂಚಿ (ಐಎಎನ್‌ಎಸ್): ಜಾರ್ಖಂಡ್‌ನಲ್ಲಿರುವ ಆಡಳಿತಾರೂಢ ಬಿಜೆಪಿಯ ಮೈತ್ರಿಕೂಟದ ಮೂರು ಪಾಲುದಾರ ಪಕ್ಷಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿಯಾದ ಪ್ರಣವ್ ಮುಖರ್ಜಿ ಅವರನ್ನು ಬೆಂಬಲಿಸಲು ನಿರ್ಧರಿಸಿವೆ.

ಈಗಾಗಲೇ ಬಿಹಾರದಲ್ಲಿನ ಮೈತ್ರಿಕೂಟದ ಪಾಲುದಾರ ಪಕ್ಷವಾದ ಸಂಯುಕ್ತ ಜನತಾದಳ ಪಕ್ಷವು ಪ್ರಣವ್ ಅವರಿಗೆ ಬೆಂಬಲ ಘೋಷಿಸಿದ್ದು, ಇದೀಗ ಜಾರ್ಖಂಡ್‌ದಲ್ಲಿನ ವಿದ್ಯಮಾನ ಬಿಜೆಪಿಗೆ ಕಳವಳ ಉಂಟುಮಾಡಿದೆ.

ಬೆಂಬಲ ಕೋರಿ ಪ್ರಣವ್ ಅವರು ಕಳೆದ ವಾರ ಕರೆದಿದ್ದ ಸಭೆಯಲ್ಲಿ ಜಾರ್ಖಂಡ್‌ನ ಅಬಕಾರಿ ಸಚಿವ ರಾಜಾ ಪೀಟರ್ ಸೇರಿದಂತೆ ಸಂಯುಕ್ತ ಜನತಾದಳದ ಇಬ್ಬರು ಶಾಸಕರು ಮತ್ತು ರಾಷ್ಟ್ರೀಯ ಜನತಾದಳ ಮುಖ್ಯಸ್ಥ ಲಾಲು ಪ್ರಸಾದ್ ಹಾಗೂ ಲೋಕ್ ಜನಶಕ್ತಿ ಪಕ್ಷದ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಭಾಗವಹಿಸಿದ್ದರು.

18 ಶಾಸಕರು ಮತ್ತು ಓರ್ವ ರಾಜ್ಯಸಭಾ, ಲೋಕಸಭಾ ಸದಸ್ಯರನ್ನು ಹೊಂದಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಆರು ಜನ ಶಾಸಕರನ್ನು ಹೊಂದಿರುವ ಅಖಿಲ ಜಾರ್ಖಂಡ್ ವಿದ್ಯಾರ್ಥಿಗಳ ಒಕ್ಕೂಟ (ಎಜೆಎಸ್‌ಯು) ಕೂಡ ಮುಖರ್ಜಿ ಅವರ ಪರ ಮತ ಚಲಾಯಿಸಲು ನಿರ್ಧರಿಸಿವೆ.

ಬಿಜೆಪಿ ಹೊರತುಪಡಿಸಿ ಎಲ್ಲ ಪಕ್ಷಗಳು ಪ್ರಣವ್ ಅವರಿಗೆ ಬೆಂಬಲ ನೀಡಲು ಒಪ್ಪಿವೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಶೈಲೇಶ್ ಸಿನ್ಹಾ ತಿಳಿಸಿದರು.

ಮೇ ತಿಂಗಳಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕೂಡ ಬಿಜೆಪಿ ಮಿತ್ರಪಕ್ಷಗಳಿಂದ ಮುಖಭಂಗ ಅನುಭವಿಸಿತ್ತು. ಇದೀಗ ರಾಜ್ಯದಲ್ಲಿ ಮುಖರ್ಜಿ ಅವರ ಬೆಂಬಲ ತಗ್ಗಿಸಲು ಬಿಜೆಪಿ ಶತಪ್ರಯತ್ನ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.