ADVERTISEMENT

ಜಿಎಸ್‌ಟಿ ಜಾರಿ ಮುಂದೂಡಲು ನಾಗರಿಕ ವಿಮಾನಯಾನ ಸಚಿವಾಲಯ ಮನವಿ

ಪಿಟಿಐ
Published 15 ಜೂನ್ 2017, 9:26 IST
Last Updated 15 ಜೂನ್ 2017, 9:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳಿಸುವ ದಿನಾಂಕವನ್ನು ಎರಡು ತಿಂಗಳ ಮಟ್ಟಿಗೆ ಮುಂದೂಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮನವಿ ಮಾಡಿದೆ.

ಹೊಸ ತೆರಿಗೆ ಪದ್ಧತಿಗೆ ಪೂರಕವಾಗಿ ವಿಮಾನಯಾನ ಸಂಸ್ಥೆಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕಾಲಾವಕಾಶ ನೀಡಬೇಕು ಎಂದು ಹಣಕಾಸು ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. ಜುಲೈ 1ರಿಂದ ಜಿಎಸ್‌ಟಿ ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ ವಿಮಾನಯಾನ ಸಚಿವಾಲಯ ಆತಂಕ ತೋಡಿಕೊಂಡಿದೆ.

ಈ ಕುರಿತು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದು, ಜಿಎಸ್‌ಟಿಯಲ್ಲಿರುವ ಕೆಲ ಅಂಶಗಳ ಬಗ್ಗೆ ಏರ್‌ ಇಂಡಿಯಾ ಸೇರಿದಂತೆ ಇತರ ವಿಮಾನಯಾನ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. ಜಾಗತಿಕ ಮಟ್ಟದಲ್ಲಿ ಟಿಕೆಟ್‌ ವಿತರಿಸುವ ವ್ಯವಸ್ಥೆಯನ್ನು ಜಿಎಸ್‌ಟಿ ಜತೆ ಹೊಂದಾಣಿಕೆಯಾಗುವಂತೆ ಮಾಡಬೇಕಿದ್ದರೆ ಕಾಲಾವಕಾಶ ಬೇಕಾಗಲಿದೆ. ಹೀಗಾಗಿ ಜಿಎಸ್‌ಟಿ ಜಾರಿ ಮುಂದೂಡಬೇಕೆಂದು ಮನವಿ ಮಾಡಲಾಗಿದೆ ಎಂದಿದ್ದಾರೆ.

ADVERTISEMENT

ಜಿಎಸ್‌ಟಿ ಜಾರಿಗೆ ಸಿದ್ಧತೆ ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದ ಸಭೆ ನಾಗರಿಕ ವಿಮಾನಯಾನ ಸಚಿವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದಿತ್ತು. ಈ ಮಧ್ಯೆ, ಜಿಎಸ್‌ಟಿ ಜಾರಿ ಮತ್ತೆ ವಿಳಂಬವಾಗಲಿದೆ ಎಂಬ ವರದಿಗಳನ್ನು ಹಣಕಾಸು ಸಚಿವಾಲಯ ಇತ್ತೀಚೆಗೆ ಅಲ್ಲಗಳೆದಿತ್ತು. ‘ಜಿಎಸ್‌ಟಿ ಜಾರಿ ವಿಳಂಬವಾಗಲಿದೆ ಎಂಬುದು ಕೇವಲ ವದಂತಿ. ದಯವಿಟ್ಟು ಜನರನ್ನು ಹಾದಿತಪ್ಪಿಸಬೇಡಿ’ ಎಂದು ಆದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.