ಮುಂಬೈ (ಪಿಟಿಐ): ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಯಾ ಪ್ರಿಯಕರ ಮತ್ತು ಆದಿತ್ಯ ಪಂಚೋಲಿ-ಜರೀನಾ ವಹಾಬ್ ತಾರಾ ದಂಪತಿ ಪುತ್ರ ಸೂರಜ್ ಪಂಚೋಲಿಯನ್ನು ಹೆಚ್ಚಿನ ವಿಚಾರಣೆಗಾಗಿ ಎರಡು ದಿನ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.
ಜಿಯಾ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಪತ್ರದಲ್ಲಿನ ಆರೋಪಗಳ ಮೇಲೆ ಸೂರಜ್‌ನನ್ನು ಬಂಧಿಸಿದ್ದ ಪೊಲೀಸರು ಭಾರತೀಯ ದಂಡ ಸಂಹಿತೆ 306ರ ಅಡಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯದ ಮುಂದೆ ಮಂಗಳವಾರ ಹಾಜರಾದ ಸೂರಜ್‌ನನ್ನು ಕೋರ್ಟ್ ಜೂನ್ 13ವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದರು.
ಜಿಯಾ ಮತ್ತು ಸೂರಜ್ ನಡುವೆ ವಿನಿಮಯವಾದ ಐದು ಪ್ರೇಮಪತ್ರ ಮತ್ತು ಜೋಡಿ ತೆರಳಿದ್ದ ಹೋಟೆಲ್ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಅಗತ್ಯವಿರುವ ಕಾರಣ ಆರೋಪಿಯನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಬೇಡಿಕೆ ಸಲ್ಲಿಸಿದರು.
ಸೂರಜ್ ವಿರುದ್ಧ ಬೆದರಿಕೆ, ದೌರ್ಜನ್ಯ, ಹಲ್ಲೆ ಮತ್ತು ಅತ್ಯಾಚಾರ, ಬಲವಂತದ ಗರ್ಭಪಾತದಂತಹ ಗಂಭೀರ ಆರೋಪಗಳಿದ್ದು, ತನಿಖೆ ಅಗತ್ಯವಿದೆ ಎಂದು ಸರ್ಕಾರಿ ವಕೀಲರು ವಾದಿಸಿದರು. ಇದಕ್ಕೂ ಮೊದಲು ಸೂರಜ್ ಪರ ವಕೀಲರು, ಜಿಯಾ ಪತ್ರದಲ್ಲಿ ಅವಳ ಸಹಿ ಇಲ್ಲ. ಅದಕ್ಕಿಂತ ಹೆಚ್ಚಾಗಿ ಪತ್ರದಲ್ಲಿ ಎಲ್ಲಿಯೂ ಸೂರಜ್ ಹೆಸರು ಪ್ರಸ್ತಾಪವಾಗಿಲ್ಲ ಎಂದು ವಾದಿಸಿದರು.
ತೀವ್ರ ಖಿನ್ನತೆಗೆ ಒಳಗಾಗಿದ್ದ ಜಿಯಾ ಅಧಿಕಾರ ಚಲಾಯಿಸುವ ಗೀಳು ಹೊಂದಿದ್ದಳು. ಅವಳ ಬಾಲ್ಯವೂ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲ. ಕೇವಲ ಆರೇಳು ತಿಂಗಳ ಗೆಳೆತನದಲ್ಲಿ 21 ವರ್ಷದ ಸೂರಜ್ 25 ವರ್ಷದ ಜಿಯಾಗೆ ಮದುವೆಯ ಭರವಸೆ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಆರೋಪಿ ಸೂರಜ್ ಸೇರಿದಂತೆ ನ್ಯಾಯಾಲಯ 23 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿದೆ. ಸೂರಜ್ ಮತ್ತು ಅವನ ತಂದೆ ಆದಿತ್ಯ ಪಂಚೋಲಿ ಅವರಿಂದಾಗಿಯೇ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಜಿಯಾ ತಾಯಿ ರಬಿಯಾ ಖಾನ್ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.