ADVERTISEMENT

ಜೀವಾವಧಿ ಶಿಕ್ಷೆಗೆ ಬಾದಲ್ ಮನವಿ

ಭುಲ್ಲರ್ ಮರಣದಂಡನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಖಲಿಸ್ತಾನ ಭಯೋತ್ಪಾದಕ ದೇವೇಂದರಪಾಲ್ ಸಿಂಗ್ ಭುಲ್ಲರ್‌ಗೆ ಗಲ್ಲು ಶಿಕ್ಷೆಯಾದರೆ ರಾಜ್ಯದ ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆಯಾಗಬಹುದು ಎಂಬ ಆತಂಕದಿಂದ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಭುಲ್ಲರ್‌ಗೆ ಕ್ಷಮಾದಾನ ನೀಡುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದರು.

ಭುಲ್ಲರ್‌ಗೆ ಯಾವ ರೀತಿ ಕ್ಷಮಾದಾನ ನೀಡಲು ಸಾಧ್ಯ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಪ್ರಧಾನಿಯವರನ್ನು ಒತ್ತಾಯಿಸಲಾಯಿತು ಎಂದು ಬಾದಲ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

`ತಪ್ಪು ನಿರ್ಧಾರದಿಂದಾಗಿ ದೇಶ ಬಹಳಷ್ಟು ಕಳೆದುಕೊಂಡಿರುವುದು ನನ್ನ ಅನುಭವಕ್ಕೆ ಬಂದಿದೆ.ರಾಜ್ಯದ ಮತ್ತು ದೇಶದ ಹಿತದೃಷ್ಟಿಯಿಂದ ಭುಲ್ಲರ್‌ಗೆ ಗಲ್ಲು ಶಿಕ್ಷೆಯಾಗುವುದನ್ನು ತಡೆಯಬೇಕಾಗಿದೆ' ಎಂದು ಹೇಳಿದರು.

`ನ್ಯಾಯ ತೀರ್ಮಾನವನ್ನು ಜಾರಿ ಮಾಡುವುದರಿಂದ ದೀರ್ಘಾವಧಿಯಲ್ಲಿ ದೇಶ ಮತ್ತು ಪಂಜಾಬ್ ರಾಜ್ಯದ ಮೇಲೆ ಆಗುವ ಪರಿಣಾಮವನ್ನು ಗಮನದಲ್ಲಿ ಇಟ್ಟುಕೊಂಡು ಭುಲ್ಲರ್ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಿಸಲು ಕ್ರಮ ತೆಗೆದುಕೊಳ್ಳಬೇಕು' ಎಂದು ಬಾದಲ್ ಮತ್ತು ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಅವರು ಶಿರೋಮಣಿ ಅಕಾಲಿ ದಳದ ಪರವಾಗಿ ಪ್ರಧಾನಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಪಡಿಸಿದ್ದಾರೆ.  

ಭುಲ್ಲರ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಸಂದರ್ಭದಲ್ಲಿ ಕಾನೂನು ಮತ್ತು ಸಂವಿಧಾನಿಕ ವಿಚಾರವನ್ನು ಸಂಪೂರ್ಣವಾಗಿ ಪರಾಮರ್ಶಿಸಿದಂತೆ ಕಾಣುತ್ತಿಲ್ಲ. ಆದ್ದರಿಂದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಶಿರೋಮಣಿ ಅಕಾಲಿ ದಳ ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪ್ರಧಾನಿ ಕಾರ್ಯಾಲಯದ ಮೂಲಗಳು ತಿಳಿಸಿವೆ. ಬಾದಲ್ ಮತ್ತು ಸುಖ್‌ಬೀರ್ ಸಿಂಗ್ ಅವರು ಪ್ರಧಾನಿ ಭೇಟಿ ಮಾಡಿದ ನಂತರ ಕೇಂದ್ರ ಗೃಹ ಸಚಿವ ಸುಶಿಲ್‌ಕುಮಾರ್ ಶಿಂಧೆ ಅವರನ್ನೂ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ.

ಭುಲ್ಲರ್ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವುದರಿಂದ ತಪ್ಪು ಸಂದೇಶವನ್ನು ರವಾನಿಸಿದಂತಾಗುತ್ತದೆ ಎಂಬ ವಾದವನ್ನು ತಳ್ಳಿಹಾಕಿದ ಬಾದಲ್, ಪಂಜಾಬ್‌ನ ಶಾಂತಿ ಮತ್ತು ಸೌಹಾರ್ದ ಬಹಳ ಮುಖ್ಯ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.