ADVERTISEMENT

ಜುಂದಾಲ್ ಗೆ ಜುಲೈ 31ರ ವರೆಗೆ ಪೊಲೀಸ್ ಕಸ್ಟಡಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 9:20 IST
Last Updated 21 ಜುಲೈ 2012, 9:20 IST

ನವದೆಹಲಿ (ಪಿಟಿಐ): ಮುಂಬೈ ಮೇಲಿನ 26/11ರ ದಾಳಿಯ ಪ್ರಮುಖ ಸಂಚುಕೋರ ಎಂದು ಹೇಳಲಾದ ಅಬು ಜಿಂದಾಲ್‌ನನ್ನು ಶನಿವಾರ ಮುಂಬೈನ ಮುಖ್ಯಮೆಟ್ರೋಪಾಲಿಟನ್ ನ್ಯಾಯಾಲಯವು ಜುಲೈ 31ರ ವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿತು.

ವಿವಿಧ ವಿಧ್ವಂಸಕ ಕೃತ್ಯಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಜುಂದಾಲ್‌ನನ್ನು ತನ್ನ ವಶಕ್ಕೆ ನೀಡುವಂತೆ ದೆಹಲಿಯ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಲಯಕ್ಕೆ (ಸಿಎಂಎಂ) ಮುಂಬೈಯ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕೋರಿಕೆ ಸಲ್ಲಿಸಿತ್ತು. ಅದನ್ನು ಅನುಸರಿಸಿ ದೆಹಲಿ ಪೊಲೀಸರು ಜುಂದಾಲ್‌ನನ್ನು ಎಟಿಎಸ್‌ಗೆ ಶುಕ್ರವಾರ ಹಸ್ತಾಂತರಿಸಿದ್ದರು.

ಜುಂದಾಲ್‌ನನ್ನು ಶನಿವಾರ  ದೆಹಲಿಯಿಂದ ಮುಂಬೈಗೆ ಕರೆತಂದ ಎಟಿಎಸ್ ಆತನನ್ನು ದಕ್ಷಿಣ ಮುಂಬೈಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿತು.  ನ್ಯಾಯಾಧೀಶ ಎಸ್.ಎಸ್. ಶಿಂಧೆ ಅವರು ತಮ್ಮ ಮುಂದೆ ಹಾಜರು ಪಡಿಸಲಾದ ಜುಂದಾಲ್ ನನ್ನು ವಶಕ್ಕೆ ಪಡೆದುಕೊಳ್ಳಲು ಮುಂಬೈ ಪೊಲೀಸ್ ಅಪರಾಧ ದಳಕ್ಕೆ ಅನುಮತಿ ನೀಡಿದರು.

ಮುಂಬೈ ಮೇಲಿನ ಭಯೋತ್ಪಾದಕ ದಾಳಿ ನಡೆದ ನಾಲ್ಕು ವರ್ಷಗಳ ಬಳಿಕ ಮುಂಬೈ ಪೊಲೀಸ್ ಅಪರಾಧ ದಳದ ವಶಕ್ಕೆ ಜುಂದಾಲ್ ಲಭಿಸಿದಂತಾಗಿದೆ. 26/11ರ ದಾಳಿ, 2010ರ ಪುಣೆ ಜರ್ಮನ್ ಬೇಕರಿ ಸ್ಫೋಟ, ನಾಸಿಕ್ ಪೊಲೀಸ್ ತರಬೇತಿ ಅಕಾಡೆಮಿ ಮೇಲಿನ ದಾಳಿ ಮತ್ತು ಔರಂಗಾಬಾದ್ ಶಸ್ತ್ರಾಸ್ತ್ರ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುವ ಸಲುವಾಗಿ ಪೊಲೀಸರು ಜುಂದಾಲ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸರ್ಕಾರದ ಪರವಾಗಿ ವಾದಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ಅವರು ಮುಂಬೈ ದಾಳಿಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ಜುಂದಾಲ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅಗತ್ಯವಿದ್ದು ಆತನನ್ನು 14 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಆದರೆ ನ್ಯಾಯಾಲಯವು ಜುಲೈ 31ರ ವರೆಗೆ ಮಾತ್ರ ಜುಂದಾಲ್‌ನನ್ನು ಪೊಲೀಸ್ ವಶಕ್ಕೆ ನೀಡಿತು.

ಇದಕ್ಕೂ ಮುನ್ನ ದೆಹಲಿ ನ್ಯಾಯಾಲಯದಲ್ಲೇ ಜುಂದಾಲ್ ನನ್ನು ತನ್ನ ವಶಕ್ಕೆ ಒಪ್ಪಿಸುವಂತೆ ಮುಂಬೈ ಪೊಲೀಸ್ ಅಪರಾಧ ದಳ ಮನವಿ ಮಾಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.