ಹೈದರಾಬಾದ್: ತೆಲಂಗಾಣವು 2014ರ ಜೂನ್‌್ ಒಂದರ ಮಧ್ಯರಾತ್ರಿ ದೇಶದ 29ನೇ ರಾಜ್ಯವಾಗಿ ಉದಯಿಸಲಿದೆ. ಈ ಸಂಬಂಧ ಅಧಿಕೃತ ಘೋಷಣೆ ಹೊರಬಿದ್ದಿದೆ. ‘ಹೊಸ ರಾಜ್ಯವು ನಿಗದಿತ ದಿನಾಂಕದಂದೇ ಅಸ್ತಿತ್ವಕ್ಕೆ ಬರಬೇಕು. ಗಡುವು ವಿಸ್ತರಿಸಲು ಸಾಧ್ಯವಿಲ್ಲ’ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್‌್ ಗೋಸ್ವಾಮಿ ನೇತೃತ್ವದ ಕಾರ್ಯಪಡೆ ರಾಜ್ಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ರಾಜ್ಯ ವಿಭಜನೆ ಪ್ರಕ್ರಿಯೆಗೆ ಸಂಬಂಧಿಸಿ ಮುಖ್ಯಕಾರ್ಯದರ್ಶಿ ಡಾ. ಪಿ.ಕೆ. ಮೊಹಂತಿ ಜತೆ ಇಲ್ಲಿ ಕೊನೆಯ ಸುತ್ತಿನ ಸಮಾಲೋಚನೆ ನಡೆಸಿದ ಗೋಸ್ವಾಮಿ, ‘ಬೇರೆ ಕೆಲಸ ಬದಿಗಿಡಿ.
ರಾಜ್ಯ ವಿಭಜನೆ ಪ್ರಕ್ರಿಯೆಗೆ ಅಗತ್ಯವಿದ್ದರೆ ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಳ್ಳಿ’ ಎಂದು ಕಟ್ಟುನಿಟ್ಟಾಗಿ ಹೇಳಿದರು.
ಕಡತ ವರ್ಗಾವಣೆ, ಆಸ್ತಿ, ಕಟ್ಟಡಗಳು, ಭೂಮಿ, ಗಡಿ, ಬೊಕ್ಕಸ ಹಾಗೂ ಉದ್ಯೋಗಿಗಳಿಗೆ ಸಂಬಂಧಿಸಿದ ಸಮಿತಿಗಳ ಕಾರ್ಯವೈಖರಿಯನ್ನು ಅವರು ಪುನರ್ ಪರಿಶೀಲಿಸಿದರು.
‘ಶಿಕ್ಷಣ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ರಾಜ್ಯ ವಿಭಜನೆಯ ನಂತರವೂ ಅವುಗಳನ್ನು ಪ್ರತ್ಯೇಕಿಸಬಹುದು.
ಯಾವುದೇ ಬದಲಾವಣೆಗೆ ಅವಕಾಶವಿಲ್ಲ. ಸಂಸತ್ನಲ್ಲಿ ಅಂಗೀಕಾರಗೊಂಡ ಆಂಧ್ರಪ್ರದೇಶ ಪುನರ್‌ರಚನೆ ಮಸೂದೆ ಹಾಗೂ
ನಿಯಮಾವಳಿಗೆ ಅನುಸಾರವಾಗಿ ವಿಭಜನೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು’ ಎಂದು ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸಲಹೆ ನೀಡಿದರು.
ಗೋಸ್ವಾಮಿ ಸಹಾಯಕರಾದ ರಾಜೀವ್‌್ ಶರ್ಮ ಮತ್ತು ಸುರೇಶ್‌್ ಕುಮಾರ್, ವಿಭಜನೆಗೆ ಸಂಬಂಧಿಸಿದ ಎಲ್ಲ 15 ಉಪಸಮಿತಿಗಳ ಪ್ರಗತಿ ಹಾಗೂ ಕಾರ್ಯವೈಖರಿಯನ್ನು ಪುನರ್ ಪರಿಶೀಲಿಸುತ್ತಿದ್ದಾರೆ. ಅಲ್ಲದೇ ಈ ಸಮಿತಿಗಳು ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸುತ್ತಿವೆಯೇ ಎನ್ನುವುದನ್ನೂ ಗಮನಿಸುತ್ತಿದ್ದಾರೆ.
ಉಭಯ ರಾಜ್ಯಗಳ ನಡುವಣ ಐಎಫ್‌ಎಸ್, ಐಎಎಸ್ ಹಾಗೂ ಐಪಿಎಸ್ ಸೇವೆಗಳನ್ನು ಪ್ರತ್ಯೇಕಿಸಲು ಜಾಗೃತ ದಳದ ಮಾಜಿ ಆಯುಕ್ತ ಪ್ರತ್ಯುಷ್‌್ ಸಿನ್ಹ ನೇತೃತ್ವದಲ್ಲಿ ಕೇಂದ್ರವು ಸಮಿತಿ ರಚಿಸಿದೆ. ನಿವೃತ್ತ ಐಎಎಸ್‌್ ಅಧಿಕಾರಿ ಕಮಲನಾಥನ್‌್ ಅವರೊಂದಿಗೆ ಸಮಾಲೋಚಿಸಿ ಈ ಸಮಿತಿ ಕಾರ್ಯನಿರ್ವಹಿಸಲಿದೆ.
ಪ್ರಮುಖ ಪಾತ್ರ: 2000ದಲ್ಲಿ ಬಿಹಾರ ವಿಭಜಿಸಿ ಜಾರ್ಖಂಡ್ ರಾಜ್ಯ ರಚಿಸುವಲ್ಲಿ ಸಿನ್ಹ ಪ್ರಮುಖ ಪಾತ್ರ ವಹಿಸಿದ್ದರು. ಜಾಗೃತ ದಳದ ಆಯುಕ್ತರಾಗಿ ಇವರು ಮಾಡಿದ ಸಾಧನೆಯು 2ಜಿ ತರಂಗಾಂತರ ಹಂಚಿಕೆ ಹಗರಣ ಬಯಲಿಗೆ ಕಾರಣವಾಯಿತು ಎನ್ನುವುದು ಗಮನಾರ್ಹ ವಿಷಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.