ADVERTISEMENT

ಜೆಇಇ, ಎನ್‌ಇಇಟಿ ಪ್ರವೇಶ ಪರೀಕ್ಷೆ ಎನ್‌ಟಿಎ ತೆಕ್ಕೆಗೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST

ನವದೆಹಲಿ: ಎನ್‌ಇಇಟಿ, ಜೆಇಇ ಸೇರಿದಂತೆ ವಿವಿಧ ಪ್ರವೇಶ ಪರೀಕ್ಷೆಗಳನ್ನು 2019ರಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ನಡೆಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸದ್ಯ ಕೇಂದ್ರ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್‌ಇ) ಈ ಪರೀಕ್ಷೆಗಳನ್ನು ನಡೆಸುತ್ತಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಸೋಮವಾರ ಲೋಕಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.

‘ಸರ್ಕಾರವು ಭಾರತೀಯ ಸೊಸೈಟಿ ನೋಂದಣಿ ಕಾಯ್ದೆ 1860ರ ಅಡಿಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ರೂಪಿಸಲಿದೆ. ಇದೊಂದು ಸ್ವಾಯತ್ತ ಸಂಸ್ಥೆಯಾಗಿರಲಿದ್ದು, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಸಿಬಿಎಸ್‌ಇ ನಡೆಸುತ್ತಿರುವ ಪರೀಕ್ಷೆಗಳನ್ನು ಮಾತ್ರ ಎನ್‌ಟಿಎ ನಡೆಸಲಿದೆ. ಸಂಸ್ಥೆ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಇತರ ಪರೀಕ್ಷೆಗಳನ್ನು ನಡೆಸಲಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಜೆಇಇ, ಎನ್‌ಇಇಟಿ ಪ್ರವೇಶ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ’ ಎಂದು ತಿಳಿಸಿದ್ದಾರೆ.

ಶಿಕ್ಷಕರ ತರಬೇತಿ: ಹೊಸ ಸಂಸ್ಥೆಗಳಿಗೆ ಅನುಮತಿ ಇಲ್ಲ
ನವದೆಹಲಿ:
2019–20ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಶಿಕ್ಷಕರ ತರಬೇತಿ ಸಂಸ್ಥೆಗಳು ಮತ್ತು ಕೋರ್ಸ್‌ಗಳನ್ನು ಆರಂಭಿಸಲು ಯಾವುದೇ ಅನುಮತಿ ನೀಡದಿರಲು ಶಿಕ್ಷಕರ ಶಿಕ್ಷಣ ಮತ್ತು ರಾಷ್ಟ್ರೀಯ ಮಂಡಳಿ (ಎನ್‌ಸಿಟಿಇ) ನಿರ್ಧರಿಸಿದೆ.

ಈಗಾಗಲೇ ಅಸ್ತಿತ್ವದಲ್ಲಿರುವ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಹೊಸ ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಐದು ವರ್ಷಗಳ ಸಂಯೋಜಿತ ಬಿ.ಇಡಿ ಕೋರ್ಸ್‌ ಆರಂಭಿಸುವಲ್ಲಿನ ತೊಡಕುಗಳು ಮತ್ತು ಇತರೆ ಸಮಸ್ಯೆಗಳ ಕಾರಣ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಹೊಸ ತರಬೇತಿ ಸಂಸ್ಥೆಗಳು ಮತ್ತು ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ನೀಡುವುದನ್ನು ಒಂದು ವರ್ಷದ ಮಟ್ಟಿಗೆ ತಡೆಹಿಡಿಯಲು ಮಂಡಳಿ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.