ADVERTISEMENT

ಜೆಟ್ ಏರ್‌ವೇಸ್‌ ವಿಮಾನದಲ್ಲಿ ಮಾರ್ಗಮಧ್ಯೆ ಮಗುವಿಗೆ ಜನ್ಮವಿತ್ತ ತಾಯಿ

ತುರ್ತಾಗಿ ಮುಂಬೈನಲ್ಲಿ ಇಳಿದು ಮತ್ತೆ ಪ್ರಯಾಣಿಸಿದ ವಿಮಾನ

ಪಿಟಿಐ
Published 18 ಜೂನ್ 2017, 14:18 IST
Last Updated 18 ಜೂನ್ 2017, 14:18 IST
ಚಿತ್ರ: ಪ್ರಜಾವಾಣಿ ಗ್ರಾಫಿಕ್
ಚಿತ್ರ: ಪ್ರಜಾವಾಣಿ ಗ್ರಾಫಿಕ್   

ನವದೆಹಲಿ: ಸೌದಿ ಅರೇಬಿಯಾದಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದ ಜೆಟ್ ಏರ್‌ವೇಸ್‌ ವಿಮಾನದಲ್ಲಿ ಮಾರ್ಗ ಮಧ್ಯದಲ್ಲಿ ಅನಿರೀಕ್ಷಿತ ಹೊಸ ಅತಿಥಿಯ ಆಗಮನವಾಗಿದೆ!

ಭಾನುವಾರ ಬೆಳಿಗ್ಗೆ 2.55ಕ್ಕೆ ಜೆಟ್‌ ಏರ್‌ವೇಸ್‌ 9 ಡಬ್ಲ್ಯು 569 ವಿಮಾನ ದಮ್ಮಾಮ್‌ನಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿತ್ತು. ಮಾರ್ಗ ಮಧ್ಯೆ ವಿಮಾನದಲ್ಲಿದ್ದ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ ಎಂದು ವಿಮಾನದ ಸಿಬ್ಬಂದಿ ತುರ್ತು ಘೋಷಣೆ ಮೊಳಗಿಸಿದರು. ತಕ್ಷಣ ವಿಮಾನವನ್ನು ಮುಂಬೈನತ್ತ ತಿರುಗಿಸಲಾಯಿತು.

ವಿಮಾನ ಇನ್ನೂ ಅರಬ್ಬೀ ಸಮುದ್ರದ ಮೇಲ್ಭಾಗದಲ್ಲಿ ಪ್ರಯಾಣಿಸುತ್ತಿದ್ದಾಗಲೇ ತಾಯಿ ಮಗುವಿಗೆ ಜನ್ಮ ನೀಡಿದ್ದಾರೆ. ವಿಮಾನದ ಸಿಬ್ಬಂದಿ ಮತ್ತು ಕೇರಳಕ್ಕೆ ಪ್ರಯಾಣಿಸುತ್ತಿದ್ದ ಶುಶ್ರೂಷಕಿಯರು ಮಹಿಳೆಗೆ ಹೆರಿಗೆ ಮಾಡಿಸಲು ನೆರವಾಗಿದ್ದಾರೆ. ಇದರೊಂದಿಗೆ ತಾಯಿಯ ಗರ್ಭದಿಂದ ವಿಮಾನದಲ್ಲಿ ಹೊಸ ಅತಿಥಿಯಾಗಿ ಮಗುವಿನ ಆಗಮನವಾಗಿದೆ.

ADVERTISEMENT

ವಿಮಾನವು ಮುಂಬೈನಲ್ಲಿ ಇಳಿದಿದ್ದು, ತಕ್ಷಣ ತಾಯಿ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಬಳಿಕ, ವಿಮಾನ ಕೊಚ್ಚಿಗೆ ಪ್ರಯಾಣ ಬೆಳೆಸಿದ್ದು, 12.45ಕ್ಕೆ ತಲುಪಬೇಕಿದ್ದ ವಿಮಾನ 90 ನಿಮಿಷ ತಡವಾಗಿ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.