ADVERTISEMENT

ಟಟ್ರಾ ಟ್ರಕ್: ಬಿಇಎಂಎಲ್ ಅಧಿಕಾರಿಗಳ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 19:30 IST
Last Updated 17 ಏಪ್ರಿಲ್ 2012, 19:30 IST

ನವದೆಹಲಿ: ಸೇನೆಗೆ ಟಟ್ರಾ ಟ್ರಕ್‌ಗಳನ್ನು ಪೂರೈಸುವಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಿಬಿಐ ಮಂಗಳವಾರ ಬಿಇಎಂಎಲ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ವಿ.ಆರ್.ನಟರಾಜನ್, ಬಿಇಎಂಎಲ್ ಮಾಜಿ ಸಂಗ್ರಹ ನಿರ್ದೇಶಕ ವಿ.ಮೋಹನ್ ಹಾಗೂ ಅನಿವಾಸಿ ಉದ್ಯಮಿ ರವಿ ರಿಶಿ ಅವರನ್ನು ವಿಚಾರಣೆಗೆ ಒಳಪಡಿಸಿತು.

ಮಂಗಳವಾರ ಬೆಳಿಗ್ಗೆ 11.30ರ ವೇಳೆಗೆ ಸಿಬಿಐ ಕೇಂದ್ರ ಕಚೇರಿಗೆ ಆಗಮಿಸಿದ ನಟರಾಜನ್ ಅವರನ್ನು ಟಟ್ರಾ ಟ್ರಕ್ ಸಂಗ್ರಹ ಹಾಗೂ ಪೂರೈಕೆಗೆ ಸಂಬಂಧಿಸಿ ಕೆಲವು ವಿಷಯಗಳನ್ನು ಸ್ಪಷ್ಟಪಡಿಸುವಂತೆ ತಿಳಿಸಲಾಯಿತು ಎಂದು ಮೂಲಗಳು ಹೇಳಿವೆ.

ಟಟ್ರಾ ಸಿಫೋಕ್ಸ್ ಯುಕೆಗೆ ಹಣ ಪಾವತಿಸಿದ ವಿಧಾನ, ಟ್ರಕ್ ಬಿಡಿಭಾಗಗಳನ್ನು ಜೋಡಿಸಿದ ರೀತಿಯಲ್ಲದೆ ನಿಗದಿತ ದಿನಾಂಕಕ್ಕಿಂತ ಮೊದಲೇ 2003ರಲ್ಲಿ ಪೂರೈಕೆ ಗುತ್ತಿಗೆಯನ್ನು ನವೀಕರಿಸಿದ ಕಾರಣ ಮುಂತಾದವುಗಳ ವಿವರವಾದ ಮಾಹಿತಿ ನೀಡುವಂತೆ ನಟರಾಜನ್ ಅವರಿಗೆ ತಿಳಿಸಲಾಯಿತು ಎಂದು ಸಿಬಿಐ ಮೂಲಗಳು ತಿಳಿಸಿವೆ.

ಟ್ರಕ್ ಪೂರೈಕೆಗೆ ಸಂಬಂಧಿಸಿ ಟಟ್ರಾ ಸಿಫೋಕ್ಸ್ ಯುಕೆ 1997ರಲ್ಲಿ ಬಿಇಎಂಎಲ್ ಜೊತೆ ಮಾಡಿಕೊಂಡಿದ್ದ ಒಪ್ಪಂದವು ರಕ್ಷಣಾ ಸಂಗ್ರಹಾ ನಿಯಮದ ಉಲ್ಲಂಘನೆಯಾಗಿದೆ ಎಂದಿರುವ ಮೂಲಗಳು, ನಿಯಮದ ಅನುಸಾರ ಟ್ರಕ್‌ಗಳನ್ನು ನೇರವಾಗಿ ಮೂಲ ಉತ್ಪಾದಕರಿಂದಲೇ ಖರೀದಿಸಬೇಕಾಗಿತ್ತು. ಆದರೆ ಟಟ್ರಾ ಸಿಫೋಕ್ಸ್ ಯುಕೆ ಮೂಲ ಉತ್ಪಾದಕ ಕಂಪೆನಿಯಾಗಿರದೇ ಇರುವುದರಿಂದ ಈ ಒಪ್ಪಂದ ನಿಯಮದ ಉಲ್ಲಂಘನೆಯಾಗಿತ್ತು ಎಂದು ಸಿಬಿಐ ಆರೋಪಿಸಿತ್ತು.

`ಕಳೆದ 26 ವರ್ಷಗಳಲ್ಲಿ ಬಿಇಎಂಎಲ್ ಸುಮಾರು 7000 ಟಟ್ರಾ ಟ್ರಕ್‌ಗಳನ್ನು ಜೋಡಿಸಿ ವಿತರಿಸಿತ್ತಲ್ಲದೆ ಏಕ ತನಿಖಾ ಆಧಾ ರದ ಮೇಲೇಯೇ ಇವುಗಳನ್ನು ನಡೆಸಲಾಗಿತ್ತು ಎಂದು ನಟರಾಜನ್ ತಿಳಿಸಿದರು.  

ಇದೇ ವೇಳೆ ತಮಗೆ ಲಂಚದ ಆಮಿಷ ಒಡ್ಡಲಾಗಿತ್ತು ಎಂಬ ವಿಷಯದ ಕುರಿತು ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಈ ವಾರಾಂತ್ಯದಲ್ಲಿ ಸಿಬಿಐ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.