ADVERTISEMENT

ಟಿಎಂಸಿ ಆಡಳಿತಾವಧಿಯಲ್ಲಿ ರೈಲ್ವೆ ಇಲಾಖೆ ದಿವಾಳಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ನವರು ರೈಲ್ವೆ ಸಚಿವರಾಗಿದ್ದಾಗ ಭಾರತೀಯ ರೈಲ್ವೆ ದಿವಾಳಿ ಹಂತಕ್ಕೆ ಬಂದಿತ್ತು ಎಂದು ಈ ಮೊದಲು ಪಿಸುಮಾತುಗಳು ಕೇಳಿಬ­ರುತ್ತಿದ್ದವು. ಈಗ ಅದು ನಿಜ ಎಂಬುದು ಬಹಿರಂಗ­ವಾಗಿದೆ.

ಸಂಸತ್ತಿನ ಮುಂದೆ ಈಚೆಗೆ ಮಂಡಿಸಿರುವ ಲೆಕ್ಕ ಮಹಾಪರಿಶೋಧಕರ ವರದಿಯು ಈ ಸತ್ಯವನ್ನು ಬಹಿರಂಗಪಡಿಸಿದೆ.
2007–08ನೇ ಸಾಲಿನಲ್ಲಿ 21,681.60 ಕೋಟಿ ರೂಪಾಯಿಗಳಷ್ಟಿದ್ದ ರೈಲ್ವೆ ನಿಧಿ 2011–12ನೇ ಸಾಲಿನಲ್ಲಿ 1,770.91 ಕೋಟಿ ರೂಪಾಯಿಗೆ ಇಳಿದಿದೆ ಎಂದು ಸಿಎಜಿ ವರದಿ ತಿಳಿಸಿದೆ.

ಈ ಮೂರು ವರ್ಷಗಳ ಅವಧಿಯಲ್ಲಿ ತೃಣಮೂಲ ಕಾಂಗ್ರೆಸ್‌ನವರು ರೈಲ್ವೆ ಸಚಿವರಾಗಿದ್ದರು. 2009­ರಿಂದ 2011ರ ವರೆಗೆ ಮಮತಾ ಬ್ಯಾನರ್ಜಿ, 2012ರಲ್ಲಿ ದಿನೇಶ್ ತ್ರಿವೇದಿ ಮತ್ತು ಮುಕುಲ್‌ ರಾಯ್‌ ರೈಲ್ವೆ ಸಚಿವರಾಗಿದ್ದರು.

ಹೊಸ ರೈಲುಗಳ ಸಂಚಾರ, ಮೂಲ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿ ವೆಚ್ಚ ಜಾಸ್ತಿಯಾದರೂ ಜನಪ್ರಿಯತೆಯ ಗುಂಗಿನಲ್ಲಿ ಪ್ರಯಾಣ ಮತ್ತು ಸರಕು ಸಾಗಣೆ ದರವನ್ನು ಹೆಚ್ಚಿಸದೆ ಮಮತಾ ಅವರು ಆದಾಯ ಮೂಲಕ್ಕೆ ಕತ್ತರಿ ಹಾಕಿದ್ದರು. ಮಮತಾ ನಂತರ ರೈಲ್ವೆ ಸಚಿವರಾದ ತ್ರಿವೇದಿ ಅವರಿಗೆ ಆದಾಯದ ಕೊರತೆ ಮನದಟ್ಟಾಗಿ ಬಜೆಟ್‌ನಲ್ಲಿ ಪ್ರಯಾಣ ಮತ್ತು ಸರಕು ಸಾಗಣೆ ದರವನ್ನು ಏರಿಸಿದರು. ಇದರಿಂದ ಮಮತಾ ಅವರ ಕೋಪಕ್ಕೆ ಗುರಿಯಾಗಿ ಸಚಿವ ಸ್ಥಾನ ಕಳೆದುಕೊಂಡರು.

ನಂತರ ರೈಲ್ವೆ ಸಚಿವರಾದ ಮುಕುಲ್‌ ರಾಯ್‌ ಅವರು ಮಮತಾ ಅವರ ಆದೇಶದಂತೆ ಏರಿಸಿದ ದರವನ್ನು ವಾಪಸ್‌ ಪಡೆದರು. ಇದರಿಂದ ರೈಲ್ವೆ ವರಮಾನ ಕುಂಠಿತಗೊಂಡು ದಿವಾಳಿಯ ಅಂಚಿಗೆ ತಲುಪಿತು. ಈ ನಿರ್ಧಾರವು ಸಿಎಜಿ ವರದಿಯಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.