ADVERTISEMENT

ಟ್ರೈ ವ್ಯಾಲಿ ವಿವಿಗೆ ಮಾನ್ಯತೆ ಕೊಟ್ಟಿದ್ದೇಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 17:15 IST
Last Updated 1 ಫೆಬ್ರುವರಿ 2011, 17:15 IST

ನವದೆಹಲಿ (ಪಿಟಿಐ) : ಕ್ಯಾಲಿಫೋರ್ನಿಯಾದ ಟ್ರೈ ವ್ಯಾಲಿ ವಿಶ್ವವಿದ್ಯಾಲಯ ‘ಅನಧಿಕೃತ’ ಎಂದು ತಿಳಿದಿದ್ದರೂ ಅಮೆರಿಕ ಸರ್ಕಾರ ಅದನ್ನು ಊರ್ಜಿತಗೊಳಿಸಿ ಭಾರತೀಯ ವಿದ್ಯಾರ್ಥಿಗಳನ್ನು ವಂಚಿಸಿದ್ದೇಕೆ ಎಂದು ಪ್ರಶ್ನಿಸುವುದಾಗಿ ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಮಂಗಳವಾರ ಇಲ್ಲಿ ತಿಳಿಸಿದರು.

ಟ್ರೈ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಹಲವು ಭಾರತೀಯ ವಿದ್ಯಾಥಿಗಳಿಗೆ ಕಾಲ್ಪಟ್ಟಿ (ಕಾಲಿಗೆ ರೇಡಿಯೋ ಕಾಲರ್) ಕಟ್ಟಿ ಅವಮಾನಿಸಿದ ಪ್ರಕರಣದ ಬಗ್ಗೆ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಈ ಘಟನೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಬೇಕಿಲ್ಲ. ವಿಶಾಲ ದೃಷ್ಟಿಕೋನದಿಂದ ಕಾಣಬೇಕು’ ಎಂದು ಮನವಿ ಮಾಡಿದರು.

ಅಮೆರಿಕದಲ್ಲಿ ಸುಮಾರು 1.8 ಲಕ್ಷ ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ ಬೆರಳೆಣಿಕೆಯಷ್ಟು ಅಂದರೆ 12 ರಿಂದ 18 ಮಂದಿ ಮಾತ್ರ ಇಂತಹ ಕಾಲ್ಪಟ್ಟಿ ಪ್ರಕರಣಕ್ಕೆ ಗುರಿಯಾಗಿದ್ದಾರೆ ಎಂದರು.

‘ಆದಾಗ್ಯೂ, ಭಾರತ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸಿಲ್ಲ. ಕ್ರಮ ಜರುಗಿಸುವಂತೆ ಅಲ್ಲಿನ ಆಡಳಿತವನ್ನು ಒತ್ತಾಯಿಸಲಿದೆ. ಕಾಲ್ಪಟ್ಟಿ ಕ್ರಮ ಅಕ್ಷಮ್ಯ’ ಎಂದು ಕೃಷ್ಣ ಹೇಳಿದರು. ಸುಮಾರು 100 ವಿದ್ಯಾರ್ಥಿಗಳು ವೀಸಾ ಪಡೆದಿದ್ದಾರೆ. ಬಹುಭಾಗ ವಿದ್ಯಾರ್ಥಿಗಳು ತಮ್ಮ ಸಂಗಾತಿಗಳ ನೆರವಿನಿಂದ ಟ್ರೈ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಹೆಸರು ನೋಂದಾಯಿಸಿ ಕೊಂಡಿದ್ದರು. ಆದರೆ ಈ ವಿಶ್ವವಿದ್ಯಾಲಯ ಅನಧಿಕೃತ ಆಗಿರುವುದರಿಂದ ಈಗ ಮುಚ್ಚಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.